Asianet Suvarna News Asianet Suvarna News

ಬಿಜೆಪಿ ಗೆಲುವಿಗಾಗಿ ಹಿಂದು ಫುಲ್‌ ಟೀಂ!

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಸಂಘ ಪರಿವಾರದ ಸಂಘಟನೆಗಳು ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆಯಲು ಸಜ್ಜಾಗಿವೆ. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಜೊತೆಗೆ 40ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಕೈಜೋಡಿಸುತ್ತಿವೆ.

BJP Plan To Win Karnataka Assembly Election

ಆತ್ಮಭೂಷಣ್‌ - ಮಂಗಳೂರು

ಮಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಸಂಘ ಪರಿವಾರದ ಸಂಘಟನೆಗಳು ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆಯಲು ಸಜ್ಜಾಗಿವೆ. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಜೊತೆಗೆ 40ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಕೈಜೋಡಿಸುತ್ತಿವೆ.

ಹಿಂದೆ ಸಂಘ ಪರಿವಾರದ ಸಂಘಟನೆಗಳು ವಿಧಾನಸಭೆ ಚುನಾವಣಾ ಪ್ರಚಾರ ನಡೆಸಿದ್ದರೂ, 2014ರ ಲೋಕಸಭಾ ಚುನಾವಣೆ ಬಳಿಕ ಸಂಘ ಪರಿವಾರದ ಎಲ್ಲ ಸಂಘಟನೆಗಳು ಪ್ರಚಾರಕ್ಕಿಳಿಯುತ್ತಿರುವುದು ಇದೇ ಮೊದಲು. ಉತ್ತರ ಪ್ರದೇಶದ ಬಳಿಕ ಈಶಾನ್ಯ ರಾಜ್ಯಗಳಲ್ಲೂ ಈ ಸಂಘಟನೆಗಳು ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅದೇ ಮಾದರಿಯನ್ನು ಈಗ ರಾಜ್ಯದಲ್ಲಿ ಅಳವಡಿಸಲಾಗುತ್ತಿದ್ದು, 40ಕ್ಕೂ ಅಧಿಕ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ಬೃಹತ್‌ ಸಂಖ್ಯೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ರಾಜಕೀಯ ಪಕ್ಷವಾಗಿ ಪ್ರಚಾರ ನಡೆಸಿದರೆ, ಸಂಘ ಪರಿವಾರದ ಅಷ್ಟೂಸಂಘಟನೆಗಳು ಅದಕ್ಕೆ ಬೆನ್ನೆಲುಬಾಗಿ ನಿಲ್ಲಲಿವೆ. ಮನೆ ಮನೆ ಭೇಟಿಯ ಜೊತೆಗೆ ಮನಃ ಪರಿವರ್ತನೆಯ ಕೆಲಸವನ್ನೂ ಮಾಡಲಿವೆ.

ಈ ಸಂಬಂಧ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮೊದಲ ಸುತ್ತಿನ ಬೈಠಕ್‌ ನಡೆದಿದ್ದು, ಈ ಬೈಠಕ್‌ನಲ್ಲಿ ರಾಜ್ಯ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆರ್‌ಎಸ್‌ಎಸ್‌ನ ಉನ್ನತ ಮಟ್ಟದ ನಾಯಕರೊಬ್ಬರು ಈ ಸಂಘಟನೆಗಳಿಗೆ ಸೂಚಿಸಿದ್ದಾರೆ. ಅದರಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜವಾಬ್ದಾರಿ ವಹಿಸಿ ಬಿಜೆಪಿಯಂತೆಯೇ ಸಂಘ ಪರಿವಾರಕ್ಕೂ ತಾಲೂಕು, ಮಂಡಲ, ಬೂತ್‌ ಮಟ್ಟದ ಪ್ರಮುಖರನ್ನು ನಿಯೋಜಿಸಲಾಗಿದೆ.

40ಕ್ಕೂ ಅಧಿಕ ಸಂಘಟನೆ: ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದು ಜಾಗರಣಾ ವೇದಿಕೆ, ಭಾರತೀಯ ಕಿಸಾನ್‌ ಸಂಘ, ಭಾರತೀಯ ಮಜ್ದೂರ್‌ ಸಂಘ, ಸಹಕಾರ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಆರೋಗ್ಯ ಭಾರತಿ, ಕ್ರೀಡಾ ಭಾರತಿ, ವಿದ್ಯಾ ಭಾರತಿ ಹೀಗೆ 40ಕ್ಕೂ ಅಧಿಕ ಸಂಘ ಪರಿವಾರದ ಸಂಘಟನೆಗಳು ರಾಜ್ಯದಲ್ಲಿವೆ. ಕರಾವಳಿಯಲ್ಲಿ 16ಕ್ಕೂ ಅಧಿಕ ಸಂಘಟನೆಗಳಿವೆ. ಇವುಗಳಲ್ಲಿ ಒಂದು ಬೂತ್‌ಗೆ 10 ಜನರಂತೆ ಕಾರ್ಯಕರ್ತರು ಇರುತ್ತಾರೆ. ಒಂದು ಕ್ಷೇತ್ರದಲ್ಲಿ ಕನಿಷ್ಠ 200 ಬೂತ್‌ಗಳಿದ್ದು, 2 ಸಾವಿರ ಕಾರ್ಯಕರ್ತರಲ್ಲದೆ, ಮಹಿಳೆಯರು, ಹಿರಿಯ ಕಾರ್ಯಕರ್ತರು ಸೇರಿ 3ರಿಂದ 4 ಸಾವಿರ ಜನ ಪ್ರಚಾರ ನಡೆಸಲಿದ್ದಾರೆ.

ಸಂಘಟನೆಗಳಲ್ಲೂ ಬದಲಾವಣೆ: ಚುನಾವಣೆ ಹಿನ್ನೆಲೆಯಲ್ಲಿ ಈ ಸಂಘಟನೆಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಬಜರಂಗದಳ ದಕ್ಷಿಣ ಪ್ರಾಂತ ಪ್ರಮುಖ ಶರಣ್‌ ಪಂಪ್‌ವೆಲ್‌ ಅವರನ್ನು ವಿಶ್ವಹಿಂದೂ ಪರಿಷತ್‌ ತೆಕ್ಕೆಗೆ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ವಿಹಿಂಪ ಬಜರಂಗದಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಂತಹ ಬದಲಾವಣೆಗಳ ಜೊತೆಗೆ ಸಂಘಟನೆಗಳ ಪ್ರಮುಖರಿಗೆ ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ. ಇದರಲ್ಲಿ ಪ್ರೊ.ಎಂ.ಬಿ.ಪುರಾಣಿಕ್‌, ಜಗದೀಶ್‌ ಶೇಣವ, ಶರಣ್‌ ಪಂಪ್‌ವೆಲ್‌ ಸೇರಿ ಪ್ರಮುಖರ ಹೆಸರು ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯರ ಯಾದಿಯಲ್ಲಿ ಕೇಳಿಬರುತ್ತಿದೆ.

ಕಮಲ ಅಭ್ಯರ್ಥಿ ಪರ ಪ್ರಚಾರ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಬಿಜೆಪಿ ಶಾಸಕರಿದ್ದಾರೆ. ಇವರನ್ನು ಹೊರತುಪಡಿಸಿ, ಈ ಬಾರಿ ಯಾರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಪಕ್ಷದ ನಾಯಕರೂ ಯಾರಿಗೂ ಭರವಸೆ ನೀಡಿಲ್ಲ. ಚುನಾವಣೆ ಘೋಷಣೆ ಬಳಿಕವೇ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ. ಹೀಗಿರುವಾಗ ಮನೆ, ಮನೆ ಪ್ರಚಾರ ಸುಲಭವಲ್ಲ. ಅದಕ್ಕಾಗಿಯೇ ಈ ಬಾರಿ ಪ್ರಚಾರಕ್ಕೆ ಅಭ್ಯರ್ಥಿಗಳ ಹೆಸರಿನ ಬದಲು ‘ಕಮಲದ ಚಿಹ್ನೆಗೆ ಮತ’ ಎಂಬುದನ್ನೇ ಹೈಲೈಟ್‌ ಮಾಡಲಾಗಿದೆ. ಈ ಮೂಲಕ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಇದರಿಂದ ಅಭ್ಯರ್ಥಿ ಯಾರೇ ಇದ್ದರೂ ಪಕ್ಷಕ್ಕೆ ಮತ ಹಾಕುವುದೇ ನಿರ್ಣಾಯಕವಾಗಲಿದೆ. ಜೊತೆಗೆ ಅಭ್ಯರ್ಥಿಗಳ ಪಟ್ಟಿಪ್ರಕಟಗೊಂಡಾಗ ಅಸಮಾಧಾನ, ಅತೃಪ್ತಿ ಶಮನಗೊಳಿಸುವುದು ಸುಲಭವಾಗಲಿದೆ ಎಂಬುದು ಸಂಘದ ಆಲೋಚನೆ.

ಹೊರಗಿನ ಅಭ್ಯರ್ಥಿಗಳು?

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಣತೊಟ್ಟಿರುವ ಸಂಘಪರಿವಾರವು ಎಲ್ಲೆಲ್ಲಿ ಬಿಜೆಪಿಯೊಳಗೆ ತೀವ್ರ ಪೈಪೋಟಿ ಇದೆಯೋ ಅಲ್ಲೆಲ್ಲ ಹೊರಗಿನ ಅಭ್ಯರ್ಥಿಗಳನ್ನು ಹಾಕಲು ಚಿಂತಿಸಿದೆ. ಅದರಂತೆ ಪ್ರಸ್ತುತ ಪುತ್ತೂರು, ಬೆಳ್ತಂಗಡಿ, ಮಂಗಳೂರು (ಉಳ್ಳಾಲ) ಕ್ಷೇತ್ರಗಳ ಪಟ್ಟಿಮಾಡಲಾಗಿದೆ. ಪುತ್ತೂರಿಗೆ ಕುಂಟಾರು ರವೀಶ ತಂತ್ರಿ, ಬೆಳ್ತಂಗಡಿಗೆ ಸಂಜೀವ ಮಠಂದೂರು ಹಾಗೂ ಮಂಗಳೂರಿಗೆ ಸತ್ಯಜಿತ್‌ ಸುರತ್ಕಲ್‌, ಎಂ.ಬಿ.ಪುರಾಣಿಕ್‌ ಅಥವಾ ಜಗದೀಶ ಶೇಣವ ಹೆಸರುಗಳು ಕೇಳಿಬರುತ್ತಿವೆ. ಈ ಕ್ಷೇತ್ರಗಳಲ್ಲಿ ಓಡಾಟ ನಡೆಸುವಂತೆ ನಾಯಕರಿಂದ ಸೂಚನೆ ರವಾನೆಯಾಗಿದೆ ಎನ್ನಲಾಗಿದೆ.

ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಸಂಘಪರಿವಾರ ಪ್ರಚಾರಕ್ಕೆ ಪೂರ್ತಿಯಾಗಿ ಧುಮುಕುತ್ತಿದೆ. ಹಿಂದುತ್ವದ ಆಧಾರದಲ್ಲಿ ಎಲ್ಲ ಹಿಂದುಗಳು ಮತ ಚಲಾಯಿಸುವಂತೆ ನೋಡಿಕೊಳ್ಳಲಾಗುತ್ತದೆ. ಶೇ.100 ಹಿಂದೂ ಮತಗಳು ಚಲಾವಣೆಯಾಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ನಿಟ್ಟಿನಲ್ಲಿ ಮನೆ ಮನೆಗೆ ಅಭಿಯಾನ ನಡೆಸಲಾಗುವುದು.

- ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಹಿಂಪ ನಾಯಕ

Follow Us:
Download App:
  • android
  • ios