ಸಕಲೇಶಪುರ: ನನ್ನ ಪತ್ನಿಯ ಮುಖಾಂತರ ನನ್ನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಯತ್ನ ನಡೆದಿತ್ತು ಎಂದು ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಜತೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಉದಯ್‌ಗೌಡ ಎಂಬುವರು ಮೊದಲಿಗೆ ನನ್ನ ಪತ್ನಿಯನ್ನು ಸಂಪರ್ಕಿಸಿ, ಮನೆಗೆ ಬಂದಿದ್ದರು. ಈ ವೇಳೆ ಜೆಡಿಎಸ್‌ ಪಕ್ಷದಲ್ಲೇ ಇದ್ದರೆ ನಿಮ್ಮ ಪತಿಗೆ ಸಚಿವ ಸ್ಥಾನ ಸಿಗುವುದಿಲ್ಲ. ಬಿಜೆಪಿಗೆ ಸೇರ್ಪಡೆಗೊಂಡರೆ ಅವರಿಗೆ ಸಚಿವ ಸ್ಥಾನ ನೀಡುತ್ತೇವೆ. 

ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಜಿ.ಪಂ. ಸದಸ್ಯೆಯೂ ಆಗಿರುವ ನನ್ನ ಪತ್ನಿ ಬಳಿ ಹೇಳಿದ್ದರು. ಇಲ್ಲ ನನ್ನ ಪತಿ ಪಕ್ಷ ತೊರೆಯುವುದಿಲ್ಲ ಎಂದಿದ್ದಕ್ಕೆ, ಕಾಂಗ್ರೆಸ್‌ನ 20 ಶಾಸಕರು ನಮ್ಮೊಡನೆ ಇದ್ದಾರೆ. ಈ ಬಗ್ಗೆ ಯೋಚಿಸಿ ನಿಮ್ಮ ನಿರ್ಧಾರ ತಿಳಿಸಿ ಎಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.