ಬೆಂಗಳೂರು(ಸೆ. 21): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಕರೆದಿರುವ ಸದನ ನಾಯಕರ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ. ಕಾವೇರಿಯ ಕಿಚ್ಚು ಜ್ವಾಲಾಮುಖಿಯಾಗುವ ಸ್ಥಿತಿ ಬಂದಿದ್ದರೂ ರಾಜ್ಯದ ರಾಜಕೀಯ ಪಕ್ಷಗಳು ಇನ್ನೂ ಪರಸ್ಪರ ಕೆಸರೆರಚಾಟದಲ್ಲೇ ನಿರತವಾಗಿರುವುದಕ್ಕೆ ಇದು ಸ್ಪಷ್ಟ ನಿದರ್ಶನವೆನಿಸಿದೆ. ಕಳೆದ ಬಾರಿ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ತಾವು ಹೇಳಿದ ಮಾತನ್ನು ಸರಕಾರ ಪಾಲಿಸಲಿಲ್ಲ. ತಾವು ಸರಕಾರಕ್ಕೆ ನೀಡುವ ಯಾವುದೇ ಸಲಹೆಗಳೂ ವ್ಯರ್ಥ. ತಮ್ಮ ಸಲಹೆಗಳನ್ನು ಸರಕಾರ ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ತಾವು ಸಭೆಗೆ ಹೋದರೆ ಯಾವ ಪ್ರಯೋಜನವೂ ಇಲ್ಲ ಎಂದು ಬಿಜೆಪಿ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಸರಕಾರಕ್ಕೆ ಸಲಹೆ ಕೊಡುವ ಬದಲು ಕೇಂದ್ರಕ್ಕೆ ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಬಿಜೆಪಿ ಸಂಸದರು ನಿರ್ಧರಿಸಿದ್ದಾರೆಂಬ ಮಾತು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇಂದು ದೆಹಲಿಗೆ ತೆರಳಿದ್ದಾರೆ.
