Asianet Suvarna News Asianet Suvarna News

ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆದ ಬಿಜೆಪಿ: ಅಮಿತ್ ಶಾ ಹೇಳುವುದೇನು?

ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಏಕಾಏಕಿ ಹಿಂಪಡೆದಿದೆ. ಇನ್ನೊಂದೆಡೆ, ಮುಂದಿನ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳೆಲ್ಲ ಸೇರಿ ಮಹಾಮೈತ್ರಿ  ಮಾಡಿಕೊಳ್ಳಲು ತಯಾರಾಗುತ್ತಿವೆ. ಈ ಬಗ್ಗೆ ಅಮಿತ್ ಶಾ ಏನು ಹೇಳುತ್ತಾರೆ. ಜೀ ನ್ಯೂಸ್ ಶೃಂಗದಲ್ಲಿ ನೀಡಿದ ಸಂದರ್ಶನದಲ್ಲಿ ಅವರಾಡಿದ ಮಾತುಗಳ ಆಯ್ದ ಭಾಗ ಇಲ್ಲಿದೆ. 

BJP National President Amit Shah Interview with Private Channel

ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಏಕಾಏಕಿ ಹಿಂಪಡೆದಿದೆ. ಇನ್ನೊಂದೆಡೆ, ಮುಂದಿನ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳೆಲ್ಲ ಸೇರಿ ಮಹಾಮೈತ್ರಿ ಮಾಡಿಕೊಳ್ಳಲು ತಯಾರಾಗುತ್ತಿವೆ. ಈ ಬಗ್ಗೆ ಅಮಿತ್ ಶಾ ಏನು ಹೇಳುತ್ತಾರೆ. ಜೀ ನ್ಯೂಸ್ ಶೃಂಗದಲ್ಲಿ ನೀಡಿದ ಸಂದರ್ಶನದಲ್ಲಿ ಅವರಾಡಿದ ಮಾತುಗಳ ಆಯ್ದ ಭಾಗ ಇಲ್ಲಿದೆ. 

ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲ ದಿಢೀರ್ ವಾಪಸ್  ಪಡೆದಿದ್ದೇಕೆ? ನಿಮ್ಮ ಪ್ರಯೋಗ ವಿಫಲವಾಯಿತೇ?
ನಾಲ್ಕು ವರ್ಷದ ಹಿಂದೆ ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಾಗಿನ ಸ್ಥಿತಿಯೇ ಹಾಗಿತ್ತು. ಬಿಜೆಪಿಯನ್ನು ಬಿಟ್ಟು ಯಾರೂ ಸರ್ಕಾರ ರಚಿಸಲು ಸಾಧ್ಯವಿರಲಿಲ್ಲ. ಪಿಡಿಪಿಯನ್ನು ಬಿಟ್ಟೂ ಸರ್ಕಾರ ರಚಿಸಲು ಸಾಧ್ಯವಿರಲಿಲ್ಲ. ನಮ್ಮ ಮುಂದೆ ಇದ್ದ ಆಯ್ಕೆಗಳು ಎರಡು ಮಾತ್ರ - ರಾಜ್ಯಪಾಲರ ಆಳ್ವಿಕೆಗೆ ಅವಕಾಶ ನೀಡಿ ಪುನಃ ಚುನಾವಣೆಗೆ ಹೋಗುವುದು. ಇನ್ನೊಂದು, ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು.

ಕಾಶ್ಮೀರ ಬಹಳ ಸೂಕ್ಷ್ಮ ರಾಜ್ಯ. ಅದನ್ನು ಜಗತ್ತೇ ನೋಡುತ್ತಿರುತ್ತದೆ. ಅಲ್ಲಿ ಚುನಾಯಿತ ಸರ್ಕಾರವೊಂದು ಇರುವುದು ಎಲ್ಲಾ ರೀತಿಯಲ್ಲೂ ಸೂಕ್ತ ಎಂದು ಎಣಿಸಿ ಪಿಡಿಪಿಗೆ ಬೆಂಬಲ ನೀಡಿದೆವು. ಮುಫ್ತಿ ಮಹಮ್ಮದ್ ಸಯೀದ್ ಅವರ ಜೊತೆ ಒಪ್ಪಂದ ಮಾಡಿಕೊಂಡು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ, ಅವುಗಳನ್ನು ಜಾರಿಗೊಳಿಸುವ ಬದ್ಧತೆಯೊಂದಿಗೆ ಸರ್ಕಾರದಲ್ಲಿ ಭಾಗೀದಾರರಾದೆವು. ಆದರೆ, ಈಗ ನಾಲ್ಕು ವರ್ಷಗಳ ನಂತರ ಕುಳಿತು ವಿಮರ್ಶೆ ಮಾಡಿದಾಗ ಇನ್ನು ಸರ್ಕಾರದಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಹೀಗಾಗಿ ಬೆಂಬಲ ವಾಪಸ್ ಪಡೆದೆವು.

ಚುನಾವಣೆ ಫಲಿತಾಂಶ ಬಂದಾಗ ನಾವು ಸರ್ಕಾರ ರಚಿಸಲು ಬೆಂಬಲ ನೀಡಿದ್ದು ಆಗಿನ ಸಮಯಕ್ಕೆ ಹಾಗೂ ನಾಲ್ಕು ವರ್ಷದ ನಂತರ ಬೆಂಬಲ ವಾಪಸ್ ಪಡೆದಿದ್ದು ಈಗಿನ ಸಮಯಕ್ಕೆ ಸೂಕ್ತವಾದ ನಿರ್ಧಾರಗಳೇ ಆಗಿವೆ. ದೇಶದ ಜನರು ಈ ಎರಡೂ ನಿರ್ಧಾರಗಳನ್ನು ಬೆಂಬಲಿಸಿದ್ದಾರೆ.

ಬಿಜೆಪಿ ಹಾಗೂ ಪಿಡಿಪಿ ಎರಡು ವಿರುದ್ಧ ಧ್ರುವಗಳಲ್ಲಿರುವ, ವ್ಯತಿರಿಕ್ತ ಸಿದ್ಧಾಂತದ ಪಕ್ಷಗಳು. ನೀವು ಮೈತ್ರಿ ಮಾಡಿಕೊಂಡಾಗಲೇ ನಿಮ್ಮ ಪಕ್ಷ ಬೆಂಕಿಯೊಂದಿಗೆಸರಸವಾಡುತ್ತಿದೆ, ಇದು ಮುಳ್ಳಿನ ಹಾಸಿಗೆ ಎಂದು ಜನ ಹೇಳಿದ್ದರು. ನಿಮಗದು ಅರ್ಥವಾಗಿರಲಿಲ್ಲವೇ?

ಸಾಹಿತ್ಯಕವಾಗಿ ಹೀಗೆಲ್ಲ ಮಾತನಾಡಬಹುದು. ಆದರೆ, ರಾಜಕೀಯದಲ್ಲಿ ಹೀಗಾಗುವುದಿಲ್ಲ. ಬಿಜೆಪಿ ಹಾಗೂ ಪಿಡಿಪಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಪರಸ್ಪರ ವಿರೋಧಿಗಳೇ ಆಗಿರಲಿ - ಯಾವತ್ತೂ ತಮ್ಮ ಸಿದ್ಧಾಂತವನ್ನು ಬಿಟ್ಟಿಲ್ಲ. ಕಾಶ್ಮೀರದ ವಿಷಯದಲ್ಲಿ ಬಿಜೆಪಿಯ ನಿಲುವು ನಾನು ಸಣ್ಣ ಹುಡುಗನಾಗಿದ್ದಾಗ ಏನಿತ್ತೋ ಅದೇ ಇಂದು ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾದಾಗಲೂ ಇದೆ. ಮುಂದೆಯೂ ಬಿಜೆಪಿಗೆ ಇದರೊಂದಿಗೆ ರಾಜಿ ಮಾಡಿಕೊಳ್ಳಲ್ಲ. ಮೈತ್ರಿ ಸರ್ಕಾರದ ಗುರಿ ಸಮಗ್ರ ಅಭಿವೃದ್ಧಿ ಹಾಗೂ ಒಳ್ಳೆಯ ಆಡಳಿತ ಮಾತ್ರ ಆಗಿತ್ತು.

ಹಾಗಿದ್ದರೆ ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ನೀಡುವ ನಿಮ್ಮ  ಗುರಿಯೂ ಈಡೇರಲಿಲ್ಲವಲ್ಲ?
ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕಡೆಯಿಂದ ಏನೇನು ವಾಗ್ದಾನ ನೀಡಿದ್ದೆವೋ ಅದನ್ನೆಲ್ಲ ಬಹುತೇಕ ಪೂರೈಸಿದ್ದೇವೆ. ೮೦ ಸಾವಿರ ಕೋಟಿ ರು. ಪ್ಯಾಕೇಜ್ ನೀಡುತ್ತೇವೆಂದು ಹೇಳಿದ್ದೆವು, ಅದರಲ್ಲಿ 61 ಸಾವಿರ ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಐಐಎಂ ನೀಡಿದೆವು, ಐಐಟಿ ನೀಡಿದೆವು, ಜಗತ್ತಿನಲ್ಲೇ ಅತಿದೊಡ್ಡ ಸುರಂಗ ರಸ್ತೆಯನ್ನು ಕಾಶ್ಮೀರದಲ್ಲಿ ನಿರ್ಮಾಣ ಮಾಡಿದೆವು, ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆಸಿಕೊಳ್ಳಲು ಅಗತ್ಯವಿರುವ ಎಲ್ಲಾ ಹಣವನ್ನು ಅಲ್ಲಿನ ಸರ್ಕಾರಕ್ಕೆ ನೀಡಿದೆವು. ಆದರೆ, ಈ ಯಾವ ಕೆಲಸವೂ ಮುಂದುವರೆಯಲೇ ಇಲ್ಲ. ಎಷ್ಟು ದಿನ ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕು?

ಅಂದರೆ ಮೆಹಬೂಬಾ ಮುಫ್ತಿ ನಿಮ್ಮ ನಿರೀಕ್ಷೆಯಂತೆ  ಕೆಲಸ ಮಾಡಲಿಲ್ಲವೇ?
ನಾವು ಹಾಗೆ ಹೇಳಲು ಸಿದ್ಧವಿಲ್ಲ. ಅವರ ಉದ್ದೇಶ ಸರಿಯಿಲ್ಲ, ಅವರ ಕಾರ್ಯವೈಖರಿ ಸರಿಯಿಲ್ಲ ಎಂದು ನಾವು ಹೇಳುವುದಿಲ್ಲ. ಆದರೆ, ಒತ್ತಡ ಹೇರುವ ಗುಂಪುಗಳು ಎಷ್ಟು ಪ್ರಬಲವಾಗಿದ್ದವು ಅಂದರೆ, ಅವು ಜಮ್ಮು ಕಾಶ್ಮೀರದ ಸಮಗ್ರ ಅಭಿವೃದ್ಧಿಯ ನಮ್ಮ ಉದ್ದೇಶವನ್ನೇ ವಿಫಲಗೊಳಿಸಿದವು. ಹೀಗಾಗಿ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಈ 3 ಪ್ರದೇಶಗಳ ನಡುವೆ ಸಂಪರ್ಕ ಬೆಸೆದು ಇವುಗಳನ್ನು ಅಭಿವೃದ್ಧಿಪಡಿಸುವ ನಮ್ಮ ಉದ್ದೇಶ ಈಡೇರಲಿಲ್ಲ. ಅಷ್ಟೇ ಅಲ್ಲ, ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಬಗೆಹರಿಯಲಿಲ್ಲ.

 ಮೆಹಬೂಬಾ ಮುಫ್ತಿ ಜೊತೆ ಕೈಜೋಡಿಸಿ ತಪ್ಪು ಮಾಡಿದೆವು ಎಂದು ಈಗ ಬಿಜೆಪಿ ಪಶ್ಚಾತ್ತಾಪ ಪಡುತ್ತಿದೆಯೇ?
ನಮ್ಮ ಮುಂದೆ ಆಯ್ಕೆಗಳೇ ಇರಲಿಲ್ಲ. ಜನಾದೇಶವೇ ಹಾಗಿತ್ತು. ಮುಂದೆ ಇದು ವಿಫಲವಾಗ ಬಹುದು ಎಂಬ ಭೀತಿಯಿಂದ ಪ್ರಯೋಗವನ್ನೇ ಮಾಡದೆ ಇರುವುದು ಅಭಿವೃದ್ಧಿಶೀಲ ರಾಜಕೀಯದ ಲಕ್ಷಣವಲ್ಲ. ವಿಫಲವಾದರೆ ತಿದ್ದಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ.

ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿರುವುದರಿಂದ 2019ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೀವು ಬೆಂಬಲ ವಾಪಸ್ ಪಡೆದಿದ್ದೀರಿ. ಇದನ್ನು ಒಪ್ಪುತ್ತೀರಾ?
ಖಂಡಿತ ಇದು ಚುನಾವಣೆಗೆ ಸಂಬಂಧಿಸಿದ ನಿರ್ಧಾರವಲ್ಲ. ಜನರಿಗೆ ಬಹುಬೇಗ ಎಲ್ಲವನ್ನೂ ಮರೆಯುವ ಖಯಾಲಿಯಿದೆ. ಚುನಾವಣಾ ನಿರ್ಧಾರವೇ ಆಗಿದ್ದರೆ ಇನ್ನು 6 ತಿಂಗಳ ನಂತರ ಬೆಂಬಲ ವಾಪಸ್ ಪಡೆಯುತ್ತಿದ್ದೆವು. ಬೇಕಾದರೆ ನೆನಪಿಟ್ಟುಕೊಳ್ಳಿ - ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರ ಒಂದು ವಿಷಯವೇ ಆಗಿರುವುದಿಲ್ಲ.

ಕರ್ನಾಟಕದ ಚುನಾವಣೆಯ ನಂತರ ದೇಶದಲ್ಲಿ ಮೋದಿ ವರ್ಸಸ್ ಇತರ ಪಕ್ಷಗಳು ಎಂಬ ಸ್ಥಿತಿ ಸಾಂದ್ರವಾಗಿದೆ. ಆ ಎಲ್ಲಾ ಪಕ್ಷಗಳೂ ಸೇರಿದರೆ ನೀವು 2014 ರಲ್ಲಿ ಪಡೆದ ಮತಗಳಿಗಿಂತ ಹೆಚ್ಚಾಗುತ್ತದೆ.ನಿಮಗೆಚಿಂತೆಯಾಗುತ್ತಿಲ್ಲವೇ?

2014 ರಲ್ಲಿ ನಮ್ಮ ಬಳಿ 6 ಸರ್ಕಾರಗಳಿದ್ದವು, ಇಂದು 19 ಸರ್ಕಾರಗಳಿವೆ. ಅಂದು ನಮ್ಮ ಬಳಿ ೪ ಮುಖ್ಯಮಂತ್ರಿಗಳಿದ್ದರು, ಇಂದು 15 ಮುಖ್ಯಮಂತ್ರಿಗಳಿದ್ದಾರೆ. ಅಂದು ಭಾರತದ ಶೇ.22 ಭೂಭಾಗದಲ್ಲಿ ಬಿಜೆಪಿಯ ಆಡಳಿತವಿತ್ತು, ಇಂದು ಶೇ.70 ಭೂಭಾಗದಲ್ಲಿ ಬಿಜೆಪಿ ಆಳ್ವಿಕೆಯಿದೆ. ಹಿಂದೊಂದು ಕಾಲವಿತ್ತು. ಆಗ ಇಂದಿರಾ ಗಾಂಧಿ ವರ್ಸಸ್ ಬೇರೆಲ್ಲರೂ ಎಂಬ ಸ್ಥಿತಿಯಿತ್ತು. ನನಗಾಗ ಇಂದಿರಾಜೀ ಅವರನ್ನು ನೋಡಿ ಅಸೂಯೆಯಾಗುತ್ತಿತ್ತು. ಕಾಂಗ್ರೆಸ್ ಎಂಥಾ ಉಚ್ಛ್ರಾಯ ಸ್ಥಿತಿಯಲ್ಲಿತ್ತು!

ಇಂದು ಮೋದಿ ವರ್ಸಸ್ ಆಲ್ ಎಂಬ ಸ್ಥಿತಿಯಿದೆ. ಇಷ್ಟೆಲ್ಲ ಆದಮೇಲೂ ನಾವು ಚುನಾವಣೆಗೆ ಹೆದರುತ್ತೇವೆ ಎಂದು ನಿಮಗೆ ಅನ್ನಿಸುತ್ತದೆಯಾ?
ಕರ್ನಾಟಕದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಿದ ದಿನ ಎಷ್ಟೊಂದು ರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆ ಮೇಲೆ ಕೈಜೋಡಿಸಿದ್ದರಲ್ಲ? ಅವರೆಲ್ಲ ಒಗ್ಗಟ್ಟಾದರೆ ನಿಮಗೆ ಸಮಸ್ಯೆಯಿಲ್ಲವೇ? ಅವರೆಲ್ಲರೂ 2014 ರ ಚುನಾವಣೆಯಲ್ಲೂ ನಮಗೆ ವಿರೋಧಿಗಳೇ ಆಗಿದ್ದರು. ಆಗ ನಾವು ಗೆದ್ದಿರಲಿಲ್ಲವೇ? ಮಮತಾ ಬ್ಯಾನರ್ಜಿ ಅವರನ್ನು ಉತ್ತರಾಖಂಡಕ್ಕೆ ಕರೆದುಕೊಂಡು ಹೋಗಿ ಭಾಷಣ ಮಾಡಿಸಿ.ಚಂದ್ರಬಾಬು ನಾಯ್ಡು ಅವರ ರ‌್ಯಾಲಿ ಉತ್ತ ರ ಪ್ರದೇಶದಲ್ಲಿ ನಡೆಸಿ ಅಥವಾ ಕುಮಾರಸ್ವಾಮಿ ಅವರನ್ನು ಪಂಜಾಬಿಗೆ ಕರೆದೊಯ್ದು ಭಾಷಣ ಮಾಡಿಸಿ. ಏನಾಗುತ್ತದೆ? ಏನೂ ವ್ಯತ್ಯಾಸವಾಗಲ್ಲ. ಉತ್ತರ ಪ್ರದೇಶದಲ್ಲಿ ಮಾತ್ರ ಎಸ್ಪಿ, ಬಿಎಸ್ಪಿ ಕೈಜೋಡಿಸಿದರೆ ಸಮಸ್ಯೆಯಾಗುತ್ತದೆ. ಈ ಎಲ್ಲ ಪಕ್ಷಗಳೂ ಅವರವರ ರಾಜ್ಯಗಳಲ್ಲಿ 2014 ರಲ್ಲೂ ನಮ್ಮ ವಿರುದ್ಧ ಸ್ಪರ್ಧಿಸಿ ಸೋತಿದ್ದವು. ಈಗಲೂ ಸ್ಪರ್ಧಿಸಿ ಸೋಲುತ್ತವೆ.

ಮತ್ತೆ ಅದೇ ಪ್ರಶ್ನೆ ಕೇಳುತ್ತೇನೆ - ಅವರೆಲ್ಲ ಒಗ್ಗಟ್ಟಾದರೆ ನಿಮ್ಮನ್ನು ಸೋಲಿಸಬಹುದಲ್ಲವೇ?
ರಾಜಕೀಯವೆಂಬುದು ಭೌತಶಾಸ್ತ್ರವಲ್ಲ, ರಸಾಯನಶಾಸ್ತ್ರ. ನೂರು ಗ್ರಾಮ್‌ಗೆ ನೂರು ಗ್ರಾಮ್ ಸೇರಿಸಿದರೆ ಭೌತಶಾಸ್ತ್ರದಲ್ಲಿ ಆಗುವಂತೆ ಇಲ್ಲಿ 200 ಗ್ರಾಮ್ ಆಗುವುದಿಲ್ಲ. ರಸಾಯನಶಾಸ್ತ್ರದ ಪ್ರಕಾರ ಆ್ಯಸಿಡ್ನಲ್ಲಿ ಇನ್ನೊಂದು ಪದಾರ್ಥವನ್ನು ಹಾಕಿದರೆ 3 ನೇ ಪದಾರ್ಥ  ಸೃಷ್ಟಿಯಾಗುವುದಿಲ್ಲವೇ, ಹಾಗೆ ರಾಜಕೀಯದಲ್ಲಾಗುತ್ತದೆ.

ಕರ್ನಾಟಕದಲ್ಲಿ ಕುಮಾರಸ್ವಾಮಿ ಮುಂದೆ 2 ಆಯ್ಕೆಗಳಿದ್ದವು. ಅವರು ನಿಮ್ಮನ್ನು ಬಿಟ್ಟು ಕಾಂಗ್ರೆಸ್ಸನ್ನು ಆಯ್ಕೆ ಮಾಡಿಕೊಂಡರು. ಇದು ಭವಿಷ್ಯದ ಸೂಚನೆಯಲ್ಲವೇ?
ಕರ್ನಾಟಕದ ವೇದಿಕೆಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದೀರಿ. ಮದುವೆಯಾಗುವುದಕ್ಕೆ 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಒಂದೊಂದು ವರ್ಷದ 21 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಇದೋ ನೋಡಿ 21 ಆಯಿತು ಎಂದು ಮದುವೆ ಮಾಡಲು ಸಾಧ್ಯವೇ?
 

Follow Us:
Download App:
  • android
  • ios