ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ಸರ್ಕಾರ ಪತನ

First Published 22, Jun 2018, 3:27 PM IST
BJP MP Shobha BJP reacts on  Haj Bhavan controversy, says BJP will launch state Wide Protest
Highlights
  • ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ರಾಜ್ಯಾದ್ಯಂತ ಹೋರಾಟ - ಬಿಜೆಪಿ ನಾಯಕರ ಎಚ್ಚರಿಕೆ
  • ಟಿಪ್ಪು ಜಯಂತಿ ಆಚರಿಸಿದ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ - ಶೋಭಾ ಕರಂದ್ಲಾಜೆ

ಬೆಂಗಳೂರು[ಜೂ.22]: ಹಜ್ ಭವನಕ್ಕೆ ಮೈತ್ರಿ ಸರ್ಕಾರ ಟಿಪ್ಪು ಸುಲ್ತಾನ್ ಹೆಸರಿಡುವುದಕ್ಕೆ ಬಿಜೆಪಿ ವಿರೋಧಿಸುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ  ಆರ್. ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಜ್ ಭವನದ ಅಭಿವೃದ್ಧಿಗೆ 50 ಕೋಟಿ ರೂ ಅನುದಾನವನ್ನು ನೀಡಲಾಗಿತ್ತು. ಅದನ್ನು ಹೈಜಾಕ್ ಮಾಡಿ ಈಗ ಟಿಪ್ಪು ಸುಲ್ತಾನ್ ಹೆಸರಿಡುತ್ತಿರುವುದು ತಪ್ಪು. ಹಜ್ ಭವನ  ಎಲ್ಲ ಮುಸ್ಲಿಂ ಬಾಂಧವರಿಗೆ ನೀಡಲಾಗಿದೆ. ಯಾರೋ ಟಿಪ್ಪು ಸುಲ್ತಾನನ್ನು  ಪ್ರೀತಿ ಮಾಡುವವರರಿಗೆ ಕೊಟ್ಟಿರೋದಲ್ಲ ಎಂದರು.

ಟಿಪ್ಪು ಹೆಸರಿಡುವುದಕ್ಕೆ ಮಾತ್ರವಲ್ಲ ಟಿಪ್ಪು ಜಯಂತಿಯನ್ನು ಕೂಡ ಬಿಜೆಪಿ ವಿರೋಧಿಸಿತ್ತು. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಲಕ್ಷಾಂತರ ಹಿಂದೂಗಳನ್ನು ಮತಾಂತರ, ಕೊಲೆ ಮಾಡಿದ್ದಾನೆ. ಅಂತಹವರ ಹೆಸರನ್ನು ಹಜ್ ಭವನಕ್ಕೆ ಇಡುವುದರಿಂದ ಆ ಭವನಕ್ಕೆ ಕಳಂಕ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ರಾಜ್ಯಾದ್ಯಂತ ಹೋರಾಟ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಅದಕ್ಕೆ ಟಿಪ್ಪು ಹೆಸರಿಡಲು ಹಣ ಕೊಟ್ಟಿಲ್ಲ. ಒಂದು ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡಿದವರು ಸರ್ವ ನಾಶ ಆಗಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಟಿಪ್ಪು ಜಯಂತಿ ಮಾಡಿದವರು ನಾಶ ಆಗಿದ್ದಾರೆ. ಮೈತ್ರಿ ಸರ್ಕಾರ ಹೆಸರಿಟ್ಟರೆ ಪತನವಾಗುವುದು ಖಚಿತ. ಅದೇ ನಾಶಕ್ಕೆ ಜಮೀರ್ ಅಹಮ್ಮದ್ ನಾಂದಿ ಹಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

 

loader