ಲಕ್ನೋ[ಅ.03]: ಪ್ರವಾಹ ವೀಕ್ಷಣೆಗೆ ತೆರಳಿದ್ದ ಸಂಸದನೊಬ್ಬ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ, ಕೊಳಚೆ ನೀರಿನಲ್ಲಿ ಬಿದ್ದಿರುವ ಘಟನೆ ಬಿಹಾರದ ಪಾಟಲೀಪುತ್ರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಸದನಿಗೆ ತೀವ್ರ ಮುಜುಗರವುಂಟು ಮಾಡಿದೆ. 

ಹೌದು ಬಿಹಾರದಲ್ಲಿ ವರುಣನ ಅಬ್ಬರದಿಂದ ಪ್ರವಾಹ ಉಂಟಾಗಿದ್ದು, ಅಪಾರ ಹಾನಿಯುಂಟಾಗಿದೆ. ಹೀಗಿರುವಾಗ ಪಾಟಲೀಪುತ್ರ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಪ್ರವಾಹ ಪೀಡಿತ ತನ್ನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವಾಹದ ನೀರಿನ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳಲು ಹೋದ ಸಂಸದ ನಿಯಂತ್ರಣ ತಪ್ಪಿ ಕೊಳಚೆ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಜನರು ಅವರನ್ನು ನೀರಿನಿಂದ ಮೇಲೆ ಬರಲು ಸಹಾಯ ಮಾಡಿದ್ದಾರೆ.

ಟಯರ್ ಗಳಿಗೆ ಕಟ್ಟಿದ್ದ ಮರದ ಹಲಗೆಯ ಮೇಲೆ, ಜನರೊಂದಿಗೆ ನಿಂತು ಫೋಟೋಗೆ ಫೋಸ್ ನೀಡಿದ್ದ ಸಂಸದ ಕೊಳಚೆ ನೀರಿಗೆ ಬಿದ್ದ ದೃಶ್ಯಾವಳಿಗಳು ಸದ್ಯ ಎಲ್ಲೆಡೆ ವೈರಲ್ ಆಗುತ್ತಿವೆ. ಇದನ್ನು ವೀಕ್ಷಿಸಿದವರೆಲ್ಲಾ ರಾಜಕಾರಣಿಗೆ ತಕ್ಕ ಶಾಸ್ತಿಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.