ಬೆಂಗಳೂರು :  ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಶಾಸಕ ಶಿವನಗೌಡ ನಾಯಕ್‌ ಅಚ್ಚರಿಯ ಭೇಟಿ ನೀಡಿ ಗೌಪ್ಯ ಚರ್ಚೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಶನಿವಾರ ಬೆಳಗ್ಗೆ ಬೆಂಗಳೂರಿನ ರಮೇಶ್‌ ಜಾರಕಿಹೊಳಿ ನಿವಾಸಕ್ಕೆ ತೆರಳಿದ ಶಿವನಗೌಡ ನಾಯಕ್‌, ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಅತೃಪ್ತ ಶಾಸಕ ಮಹೇಶ್‌ ಕುಮಟಳ್ಳಿ ಅವರೂ ಹಾಜ ರಿದ್ದುದು ಕುತೂಹಲ ಹೆಚ್ಚಲು ಕಾರಣವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಹಲವು ಅತೃಪ್ತ ಶಾಸಕರು ಬಿಜೆಪಿಯತ್ತ ವಾಲುವ ವಿದ್ಯಮಾನಗಳು ಜರುಗಿ ತಣ್ಣಗಾಗಿದ್ದು, ಇದೀಗ ಕಾಂಗ್ರೆಸ್‌-ಬಿಜೆಪಿ ಶಾಸಕರ ಭೇಟಿ ರಾಜ್ಯ ರಾಜಕೀಯದಲ್ಲಿ ಹೊಸ ಸುತ್ತಿನ ಸಂಚಲನಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ರಮೇಶ್‌ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಇಂತಹ ವೇಳೆಯಲ್ಲೇ ಶಿವನಗೌಡ ನಾಯಕ್‌ ಜತೆ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ರಮೇಶ್‌ ಜಾರಕಿಹೊಳಿ ತಂಡದಲ್ಲಿ ಗುರುತಿಸಿಕೊಂಡಿದ್ದ ಡಾ. ಉಮೇಶ್‌ ಜಾಧವ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಚುನಾವಣಾ ರಾರ‍ಯಲಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ದಟ್ಟವಾಗುತ್ತಿದೆ.

ಈ ನಡುವೆ ಬಿಜೆಪಿ ನಾಯಕರ ರಮೇಶ್‌ ಜಾರಕಿಹೊಳಿ ಭೇಟಿ ಇವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟು ಹಾಕಿದೆ. ಆದರೆ, ಈ ಬಗ್ಗೆ ಯಾವುದೇ ಅಂತಿಮ ಮಾಹಿತಿ ಲಭ್ಯವಾಗಿಲ್ಲ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ದೂರಿನ ಹಿನ್ನೆಲೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿರುವ ನಾಲ್ಕು ಮಂದಿ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ವಿಧಾನಸಭೆ ಅಧ್ಯಕ್ಷ ರಮೇಶ್‌ ಕುಮಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ. ರಮೇಶ್‌ ಜಾರಕಿಹೊಳಿ, ಉಮೇಶ ಜಾಧವ್‌, ಬಿ.ನಾಗೇಂದ್ರ, ಮಹೇಶ್‌ ಕುಮಟಳ್ಳಿ ಅವರಿಗೆ ಮಾ.12ರಂದು ತಮ್ಮನ್ನು ಖುದ್ದು ಭೇಟಿ ಮಾಡಿ ವಿವರಣೆ ನೀಡುವಂತೆ ತಿಳಿಸಿದ್ದಾರೆ.