ಬೆಂಗಳೂರು[ಜು.20]: ರಾಜ್ಯ ರಾಜಕೀಯ ಪ್ರಹಸನ ಎರಡು ವಾರಗಳಾದರೂ ಮುಂದುವರೆದಿದೆ. ಅತ್ತ ಮೈತ್ರಿ ಶಾಸಕರು ವಿಶ್ವಾಸಮತ ಯಾಚನೆ ವಿಲಂಬ ಮಾಡುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚಿಸಲೇಬೇಕೆಂದು ಪಟ್ಟು ಹಿಡಿದಿದೆ. ಈ ನಡುವೆ ಸದನ ಸೋಮವಾರಕ್ಕೆ ಮುಂದೂಡಲಾಗಿದ್ದು, ಸದ್ಯ ಎಲ್ಲಾ ಪಕ್ಷದ ಶಾಸಕರು ರೆಸಾರ್ಟ್ ಗಳಿಗೆ ಶಿಫ್ಟ್ ಆಗಿದ್ದಾರೆ. ಈ ನಡುವೆ ಬಿಜೆಪಿ ಶಾಸಕ ರೇಣುಕಾಚಾರ್ಯ 'ನಾನು ಕುಮಾರಸ್ವಾಮಿಯವರ ಸಹಾಯದಿಂದ ಮಂತ್ರಿ ಆಗಲಿಲ್ಲ. ಯಡಿಯೂರಪ್ಪನವರ ಆಶೀರ್ವಾದದಿಂದ ಮಂತ್ರಿಯಾದೆ' ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.

ಗೋವಾಗೆ ತೆರಳಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ 'ನಾನು ಗೋವಾಗೆ ಹೋಗಿದ್ದು ನಿಜ, ಆದರೆ  ಮಧ್ಯರಾತ್ರಿ ಕುಮಾರಸ್ವಾಮಿ ತಾವಾಗಿಯೇ ಗೋವಾಗೆ ಬಂದು ಸಹಾಯ ಮಾಡುವುದಾಗಿ ಹೇಳಿದ್ದರು. ಆದರೆ ನಾನು ತಿರಸ್ಕರಿಸಿದೆ. ಮರು ದಿನ‌ ಮಧ್ಯಾಹ್ನವೂ ನಾನು ಹಾಗೂ ಕುಮಾರಸ್ವಾಮಿ ನಡುವೆ ಜೋರು ಮಾತಿನ‌ ಚಕಮಕಿ ನಡೆದಿದ್ದು ನಿಜ. ನಮ್ಮ‌ಮಾತಿನ ನಡುವೆ ಪಿ. ಎ. ನರೇಂದ್ರಸ್ವಾಮಿ ಮಧ್ಯ ಪ್ರವೇಶಿಸಿದ್ದರು. ನನಗೆ ಯಾರೂ ಹೊಡೆಯಲಿಲ್ಲ. ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕುತ್ತೇನೆ, ಸಾರ್ವಜನಿಕ ಚರ್ಚೆಗೆ ಬನ್ನಿ ಮುಖಾಮುಖಿ ಚರ್ಚಿಸೋಣ ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಸಂದರ್ಭದಲ್ಲಿ ದೇವೇಗೌಡರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ರೆಣುಕಾಚಾರ್ಯ 'ದೇವೇಗೌಡರ ಕುಟುಂಬದವರು ವಾಮಾಚಾರದಲ್ಲಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾಳೆ ವಿಶ್ವಾಸಮತ ಆದ ಬಳಿಕ ಮುಂದಿನ ಅಧಿವೇಶನದಲ್ಲಿ ನಾನು ಕುಮಾರಸ್ವಾಮಿಯವರ ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಾವು ಸದನದಲ್ಲಿ ಗಲಾಟೆ ಮಾಡುವಂತೆ ಮಾಡಿ ಅಮಾನತು ಮಾಡಲು‌‌ ಕುಮಾರಸ್ವಾಮಿ ತಂತ್ರ ಮಾಡಿ ಪ್ರಚೋದನೆ ಮಾಡಿದ್ದರು. ಬುದ್ದಿ ಭ್ರಮಣೆ ಆದಂತೆ ವರ್ತಿಸುತ್ತಿದ್ದಾರೆ. ಆದರೆ ಅವರ ಪ್ರಚೋದನೆಗೆ ನಾವು ಮಣಿಯಲಿಲ್ಲ' ಎಂದು ಕಿಡಿ ಕಾರಿದ್ದಾರೆ.