ಆಗ್ರಾ :  ನಾನು ಪ್ರಧಾನಿ ನರೇಂದ್ರ ಮೋದಿಯಂತೆ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಅಲಿಗರ್ ಬಿಜೆಪಿ ಶಾಸಕ  ರಾಜೀವ್ ಸಿಂಗ್ ದಿಲೇರ್ ಬಾಯಿ ತಪ್ಪಿ ಹೇಳಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಜಲಾಲ್ ಪುರ ಪ್ರದೇಶದಲ್ಲಿ  ಗ್ಯಾಸ್ ವಿತರಣೆ ಮಾಡಿ ಮಾತನಾಡಿದ ಅವರು, ಈ ಹೇಳಿಕೆ ನೀಡಿದ್ದು, ಬಳಿಕ ಸಮರ್ಥನೆ ನೀಡಿದ್ದಾರೆ.  ಈ ಹೇಳಿಕೆಯನ್ನು ತಾವು ಬಾಯಿತಪ್ಪಿ ಹೇಳಿದ್ದಾಗಿ ತಿಳಿಸಿದ್ದಾರೆ. 

ಅಲ್ಲದೇ ತಮ್ಮ ಹೇಳಿಕೆಯ ಅರ್ಥವೇನೆಂದರೆ ಪ್ರಧಾನಿ ನರೇಂದ್ರ ಮೋದಿಯೂ ಕೂಡ ಜಾತಿಯನ್ನು ನಂಬುವುದಿಲ್ಲ ಎನ್ನುವುದಾಗಿತ್ತು. ಬಿಜೆಪಿ ಮುಸ್ಲಿಂ ಹಾಗೂ ಹಿಂದುಗಳ ನಡುವೆ ಯಾವುದೇ ರೀತಿ ಭಿನ್ನತೆಯನ್ನು  ತೋರಿಸುವುದಿಲ್ಲ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವುದು ತಮ್ಮ ಧ್ಯೇಯ ವಾಕ್ಯ ಎಂದು ಹೇಳಿದ್ದಾರೆ. 

ಅಲ್ಲದೇ ಈ ಹೇಳಿಕೆಯ ಬಳಿಕ ಬಿಜೆಪಿಯನ್ನು ಹೆಚ್ಚು ಹೊಗಳಿದ್ದು, ನಮ್ಮ ಪಕ್ಷದ ಮುಖಂಡರು ಎಲ್ಲರನ್ನೂ ಸಮನಾಗಿ ಕಾಣುತ್ತಾರೆ.  ಪ್ರಧಾನಿ ನರೇಂದ್ರ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಜನತೆಯ ಅಭಿವೃದ್ಧಿಗಾಗಿ ಸಾಕಷ್ಟು ರಿತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಮಾನ್ಯ ಜನರಿಗೆ ಬ್ಯಾಂಕ್ ಖಾತೆ ತೆರೆಯುವದನ್ನು ಸುಲಭವಾಗಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.