ಹೈದರಾಬಾದ್(ಜ.18): ಉಗ್ರ ಹಿಂದೂವಾದಿ, ಗೋರಕ್ಷಕ ಎಂದು ಕರೆಸಿಕೊಳ್ಳುವ ತೆಲಂಗಾಣದ ಏಕೆಐಕ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ನಿನ್ನೆಯಷ್ಟೇ ಎಐಎಂಐಎಂ ಶಾಸಕ ಮಮ್ತಾಜ್ ಅಹ್ಮದ್ ಖಾನ್ ತೆಲಂಗಾಣದ ಹಂಗಾಮಿ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಹ್ಮದ್ ಖಾನ್ ಹಿಂದೂ ವಿರೋಧಿ ಒವೈಸಿ ಸಹೋದರರ ಪಕ್ಷದವರಾಗಿದ್ದು, ಅವರೆದುರು ತಾವು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ರಾಜಾ ಸಿಂಗ್ ಹೇಳಿದ್ದಾರೆ.

ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಎಐಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್ ಉಪಸ್ಥಿತಿಯಲ್ಲಿ ತಾವು ಯಾವುದೇ ಕಾರಣಕ್ಕೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ರಾಜಾ ಸಿಂಗ್ ಶಪಥ ಮಾಡಿದ್ದರು.

ಅಹ್ಮದ್ ಖಾನ್ ಅವರ ಪಕ್ಷ ಹಿಂದೂಗಳ ಭಾವನೆ, ಸಂಸ್ಕೃತಿಗೆ ಗೌರವ ಕೊಡುವುದಿಲ್ಲ ಮತ್ತು ಆ ಪಕ್ಷದ ನಾಯಕರು ಸದಾ ಹಿಂದೂಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಹೇಳುತ್ತಿರುತ್ತಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

ಒವೈಸಿ ಸಹೋದರರು ಮತ್ತು ಎಐಎಂಐಎಂ ಪಕ್ಷದವರು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಹಾಡಲೊಪ್ಪಿದರೆ ತಾವು ಈಗಲೇ ಹಂಗಾಮಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸುವುದಾಗಿ ರಾಜಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.