ಬೆಂಗಳೂರು[ಆ.24]: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪತ್ನಿಯೊಂದಿಗೆ ದಾಂಪತ್ಯ ಜೀವನ ಮುಂದುವರಿಸಬೇಕು ಎಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಪ್ರಕರಣವನ್ನು ಅಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.

ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಜಿ.ನಿಜಗಣ್ಣನವರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಸವಿತಾ ಅವರು ಪತಿ ಕುಮಾರಸ್ವಾಮಿ ಜೊತೆ ದಾಂಪತ್ಯ ಜೀವನ ಮುಂದುವರಿಸಬಹುದು ಎಂದು 2018ರ ಸೆ.12ರಂದು ಮೈಸೂರಿನ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ (ಕೌಟುಂಬಿಕ) ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗಿದೆ.

ಪ್ರಕರಣ ಕುರಿತು ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತವರ ಪತ್ನಿ ಸವಿತಾ, ಯಾವುದೇ ನೋಟಿಸ್‌ ನಿರೀಕ್ಷಿಸದೆ 2019ರ ಸೆ.3ರಂದು ಮೈಸೂರಿನ ಸಂಬಂಧಪಟ್ಟಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಆ ದಿನ ಅಥವಾ ನ್ಯಾಯಾಲಯ ನಿಗದಿಪಡಿಸುವ ದಿನದಂದು ಇಬ್ಬರೂ ತಮ್ಮ ಆಕ್ಷೇಪಣೆ ಸಲ್ಲಿಸಬೇಕು. ಅದನ್ನು ಪರಿಗಣಿಸಿ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯ 2020ರ ಮಾ.31ರೊಳಗೆ ಕಾನೂನು ಪ್ರಕಾರ ತೀರ್ಮಾನಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು:

ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಸವಿತಾ ಅವರು 2008ರ ಅ.9ರಂದು ವಿವಾಹವಾಗಿದ್ದರು. ಆದರೆ, 2012ರಿಂದ ಪತಿ-ಪತ್ನಿ ಪ್ರತ್ಯೇಕವಾಗಿ ಜೀವನ ಮಾಡುತ್ತಿದ್ದರು. 2018ರಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್‌ 9ರಡಿಯಲ್ಲಿ ಸವಿತಾ ಅರ್ಜಿ ಸಲ್ಲಿಸಿ ತಮ್ಮ ವೈವಾಹಿಕ ಜೀವನದ ಹಕ್ಕುಗಳನ್ನು ಮರು ಸ್ಥಾಪಿಸುವಂತೆ ಕೋರಿದ್ದರು. ಆ ಅರ್ಜಿಯನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯ 2018ರ ಅ.12ರಂದು ಪುರಸ್ಕರಿಸಿತ್ತು. ಪತಿ ಕುಮಾರಸ್ವಾಮಿಯೊಂದಿಗೆ ಸೇರಿ ಸವಿತಾ ದಾಂಪತ್ಯ ಜೀವನ ಮುಂದುವರಿಸಬಹುದು ಎಂದು ಆದೇಶಿಸಿತ್ತು.

ಈ ಆದೇಶ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಹೈಕೋರ್ಟ್‌, ಕೌಟುಂಬಿಕ ನ್ಯಾಯಾಲಯದ ಆದೇಶಕ್ಕೆ 2019ರ ಫೆ.7ರಂದು ತಡೆಯಾಜ್ಞೆ ನೀಡಿತ್ತು. ಅದರ ತೆರವಿಗೆ ಕೋರಿ ಸವಿತಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ತಮ್ಮ ಅಹವಾಲು ಆಲಿಸದೇ ಪತ್ನಿಯ ಅರ್ಜಿಯನ್ನು ಪುರಸ್ಕರಿಸಿದೆ ಎಂಬುದು ಶಾಸಕರ ಆಕ್ಷೇಪವಾಗಿತ್ತು. ಕೌಟುಂಬಿಕ ನ್ಯಾಯಾಲಯ ಸಾಕಷ್ಟುಬಾರಿ ಅವಕಾಶ ನೀಡಿದರೂ, ಕುಮಾರಸ್ವಾಮಿ ತಮ್ಮ ಅಹವಾಲು ಸಲ್ಲಿಸಿರಲಿಲ್ಲ ಎಂಬುದು ಸವಿತಾ ಅವರ ಆಕ್ಷೇಪಣೆಯಾಗಿತ್ತು.