ವಿಜಯಪುರ [ಜು.03] : ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ವಿಜಯಪುರದಲ್ಲಿ ಮಾತನಾಡಿದ‌ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಸಿಎಂ ಒಂದು ಒಳ್ಳೆಯ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಆದಿಚುಂಚನಗಿರಿ ಸ್ವಾಮೀಜಿ ಅವರ ಕನಸು ನನಸು ಮಾಡುವ ಸಲುವಾಗಿ ವಿದೇಶಕ್ಕೆ ಹೋಗಿದ್ದಾರೆ.

ಕಾಲಭೈರವೇಶ್ವರನ ಭೂಮಿ ಪೂಜೆಗೆ ತೆರಳಿದ್ದು, ಕಾಲಭೈರವೇಶ್ವರ ಅವರಿಗೂ, ನಮಗೂ ಒಳ್ಳೆಯದು ಮಾಡಲಿ. ಸಿಎಂ ಕುಮಾರಸ್ವಾಮಿ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ದಿ ಕೆಲಸ ಮಾಡಲಿ ಎಂದು ಯತ್ನಾಳ್ ಹೇಳಿದ್ದಾರೆ.

ಜಿ.ಟಿ.ದೇವೇಗೌಡರ ಹೊಗಳಿಕೆ 

ಇನ್ನು ಸಚಿವ ಜಿ.ಟಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ವಿಚಾರವನ್ನೂ ಪ್ರಸ್ತಾಪಿಸಿದ ಯತ್ನಾಳ್ , ಅವರೊಬ್ಬ ನಿಜವಾದ ಒಳ್ಳೆಯ ರಾಜಕಾರಿಣಿ.  ಅವರಿಗೆ ಪ್ರಧಾನಿ ಮೋದಿಯವರ ಮೇಲೆ ಗೌರವ ಇದೆ, ಹಾಗಾಗಿ ನಾನು ಅವರಿಗೆ ಕೃತಜ್ಞತೆ ಹೇಳುತ್ತೇನೆ.  ಇಂತಹ ರಾಜಕಾರಣಿಗಳು ಕರ್ನಾಟಕಕ್ಕೆ ಬೇಕು ಎಂದರು. 

ಕಾಂಗ್ರೆಸ್ ನವರು ಸಿಎಂ ಕನಸು ಕಾಣುವುದು ಬೇಡ 

ರಾಜ್ಯದಲ್ಲಿ ಹಲವು ಕಾಂಗ್ರೆಸ್ ನಾಯಕರು ತಾವು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ.  ಆದರೆ ಅವರು ಈ ರೀತಿ ಕನಸು ಕಾಣುವುದು ಬೇಡ.  ಕರ್ನಾಟಕದಲ್ಲಿ ಇನ್ನೆಂದೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಮಧ್ಯಂತರ ಅಥವಾ ನಾಲ್ಕು ವರ್ಷದ ಬಳಿಕ ಚುನಾವಣೆ ಬಂದರೂ ಕೂಡ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.