ರಾಂಚಿ(ಜು.26): ಇಷ್ಟು ದಿನ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಗುಂಪೊಂದು ನಿರ್ದಿಷ್ಟ ವ್ಯಕ್ತಿಯನ್ನು ಒತ್ತಾಯಿಸಿದ್ದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಇದೀಗ ಬಿಜೆಪಿ ಸಚಿವರೊಬ್ಬರೇ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಕಾಂಗ್ರೆಸ್’ನ ಮುಸ್ಲಿಂ ಶಾಸಕರೊಬ್ಬರನ್ನು ಒತ್ತಾಯಿಸಿದ ಘಟನೆ ನಡೆದಿದೆ.

ಜಾರ್ಖಂಡ್’ನ ನಗರಾಭಿವೃದ್ಧಿ, ವಸತಿ ಹಾಗೂ ಸಾರಿಗೆ ಸಚಿವ ಸಿಪಿ ಸಿಂಗ್ ಸಾರ್ವಜನಿಕವಾಗಿ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರ ಕೈ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಅನ್ಸಾರಿ ಸೇರಿದಂತೆ ದೇಶದ ಎಲ್ಲಾ ಮುಸ್ಲಿಮರ ಪೂರ್ವಿಕರು ಹಿಂದೂಗಳಾಗಿದ್ದು, ಮುಸ್ಲಿಮರೂ ಕೂಡ ಜೈ ಶ್ರೀರಾಮ್ ಘೋಷಣೆ ಕೂಗಲೇಬೇಕು ಎಂದು ಸಿಪಿ ಸಿಂಗ್ ಒತ್ತಾಯಿಸಿದ್ದಾರೆ.

ಆದರೆ ಸಿಪಿ ಸಿಂಗ್ ಆದೇಶವನ್ನು ಧಿಕ್ಕರಿಸಿದ ಅನ್ಸಾರಿ, ನಿರುದ್ಯೋಗ, ವಿದ್ಯುತ್, ನೀರಿನ ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದು, ಮೊದಲು ಇದನ್ನು ಬಗೆಹರಿಸುವತ್ತ ನಾವು ಗಮನಹರಿಸಬೇಕೆ ಹೊರತು ಇಂತಹ ಘೋಷಣೆಗಳ ಕುರಿತಲ್ಲ ಎಂದು ಪ್ರತಿಪಾದಿಸಿದ್ದಾರೆ.