2 ವರ್ಷದಲ್ಲಿ ಈಗಾಗಲೇ ಕುಟ್ಟಪ್ಪ ಸೇರಿದ್ದಂತೆ 5 ಹಿಂದೂ ಮುಂಖಡರನ್ನು ಕಳೆದುಕೂಂಡಿದ್ದೇವೆ. ನಮ್ಮ ತಾಳ್ಮೆಯನ್ನು ಮುಖ್ಯಮಂತ್ರಿಯವರು ಪರೀಕ್ಷೆ ಮಾಡುತ್ತಿದ್ದಾರೆ.
ಬೆಂಗಳೂರು(ಅ.16): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಪದೇ ಪದೇ ಹಿಂದು ಮುಖಂಡರ ಕಗ್ಗೋಲೆಗಳು ನಡೆಯುತ್ತಿರುವುದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಖಂಡಿಸಿ ಹಿಂದುಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳದಲ್ಲಿ ಪಾಲ್ಗೊಂಡ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಮುಂಖಡರ ಹತ್ಯೆ ಹೆಚ್ಚಾಗುತ್ತಿವೆ. ಶಿವಾಜಿನಗರದಲ್ಲಿ ಅಫ್ಜಲ್'ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2 ವರ್ಷದಲ್ಲಿ ಈಗಾಗಲೇ ಕುಟ್ಟಪ್ಪ ಸೇರಿದ್ದಂತೆ 5 ಹಿಂದೂ ಮುಂಖಡರನ್ನು ಕಳೆದುಕೂಂಡಿದ್ದೇವೆ. ನಮ್ಮ ತಾಳ್ಮೆಯನ್ನು ಮುಖ್ಯಮಂತ್ರಿಯವರು ಪರೀಕ್ಷೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಅವರು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಹಿರಿಯ ಮುಖಂಡ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹತ್ಯೆಯನ್ನು ಖಂಡಿಸಿದ್ದಾರೆ.
ಬಿಗಿ ಬಂದೋಬಸ್ತ್
ಭದ್ರತೆಯ ಹಿತದೃಷ್ಟಿಯಿಂದ ಶಿವಾಜಿನಗರದ ವಿಕ್ಟೋರಿಯಾ ಆಸ್ಪತ್ರೆ ಬಳಿಗೆ ಸಶಸ್ತ್ರ ಸೀಮಾ ಪಡೆ, ಮುವತ್ತಕ್ಕೂ ಹೆಚ್ಚು ಸಿಬ್ಬಂದಿ, ಡಿಸಿಪಿ,ಎಸಿಪಿ ಹಾಗೂ 6 ಇನ್ಸ್'ಪೆಕ್ಟರ್ ಅವರನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರ ಆಯುಕ್ತ ಮೇಘರೀಕ್ ಹತ್ಯೆಯ ಮಾಹಿತಿ ಪಡೆದಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ರುದ್ರೇಶ್ ಅವರು ತಮ್ಮ ಮನೆಗೆ ವಾಪಸ್ ಹೋಗುವ ವೇಳೆ ಕೊಲೆಯಾಗಿದ್ದರು. ಪಲ್ಸರ್ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರುದ್ರೇಶ್'ರನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು.
