2019 ರ ಲೋಕಸಭೆ ಚುನಾವಣೆ ತಯಾರಿ ಯನ್ನು ಬಿಜೆಪಿ ಈಗಿನಿಂದಲೇ ಆರಂಭಿಸಿದ್ದು, ಎಲ್ಲ 543 ಲೋಕಸಭೆ ಕ್ಷೇತ್ರ ಗಳಿಗೂ ತಲಾ ಓರ್ವ ಉಸ್ತುವಾರಿಯನ್ನು ನೇಮಿಸಲು ನಿರ್ಧರಿಸಿದೆ. ಇದರ ಜತೆಗೆ 11 ಜನರ ಸಮಿತಿಯೊಂದನ್ನು ಪ್ರತಿ ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಪ್ರಾರಂಭಕ್ಕೆಂದು ರಚಿಸಲಾಗಿದೆ.
ನವದೆಹಲಿ : 2019 ರ ಲೋಕಸಭೆ ಚುನಾವಣೆ ತಯಾರಿ ಯನ್ನು ಬಿಜೆಪಿ ಈಗಿನಿಂದಲೇ ಆರಂಭಿಸಿದ್ದು, ಎಲ್ಲ 543 ಲೋಕಸಭೆ ಕ್ಷೇತ್ರ ಗಳಿಗೂ ತಲಾ ಓರ್ವ ಉಸ್ತುವಾರಿಯನ್ನು ನೇಮಿಸಲು ನಿರ್ಧರಿಸಿದೆ. ಇದರ ಜತೆಗೆ 11 ಜನರ ಸಮಿತಿಯೊಂದನ್ನು ಪ್ರತಿ ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಪ್ರಾರಂಭಕ್ಕೆಂದು ರಚಿಸಲಾಗಿದೆ.
ಆದರೆ ಯಾವ ಪ್ರಭಾರಿಯೂ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿರುವುದಿಲ್ಲ. ಹೊರಗಿನ ವ್ಯಕ್ತಿಗಳನ್ನೇ ಪ್ರಭಾರಿಯೆಂದು ನೇಮಿಸಲಾಗುತ್ತದೆ. ಇನ್ನು 11 ಜನರ ಸಮೂಹಕ್ಕೆ ಚುನಾವಣಾ ತಯಾರಿ ಟೋಳಿ (ಚುನಾವಣಾ ತಯಾರಿ ತಂಡ) ಎಂದು ಹೆಸರಿಡಲಾಗಿದೆ. ಇವರಿಗೆ 13 ನಿರ್ದಿಷ್ಟ ಹೊಣೆಗಾರಿಕೆ ವಹಿಸಲಾಗಿದೆ. ಅಲ್ಲದೆ, ಪ್ರತಿ ಕ್ಷೇತ್ರಕ್ಕೂ ಮೂವರು ಸದಸ್ಯರ ಒಂದು ಸೋಷಿಯಲ್ ಮೀಡಿಯಾ ಟೀಮ್, ಮೂವರು ಸದಸ್ಯರ ಕಾನೂನು ತಂಡ ಹಾಗೂ ಕೇಂದ್ರ ಸರ್ಕಾರದ ಯೋಜನೆಯ ಜಾರಿ ಮೇಲೆ ನಿಗಾ ವಹಿಸಲು ಇಬ್ಬರ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ.
ಬಿಎಸ್ಪಿ ಪ್ರತೀ ಕ್ಷೇತ್ರಕ್ಕೂ ಉಸ್ತುವಾರಿ ನೇಮಿಸುವ ಪರಿಪಾಠ ಹೊಂದಿದೆ. ಇದನ್ನು ಈಗ ಬಿಜೆಪಿ ಮೊದಲ ಬಾರಿ ಅನುಕರಿಸಿದೆ. ಚುನಾವಣೆಗೆ ಸಿದ್ಧತೆ ಆರಂಭವಾಗಿದೆ ಈಗಿನಿಂದಲೇ ತಯಾರಿ ಆರಂಭಿಸಿದರೆ ನಮ್ಮ ಬಲ ಹಾಗೂ ದೌರ್ಬಲ್ಯಗಳು ತಿಳಿಯುತ್ತದೆ.
ಮೋದಿ-ಶಾ ಜೋಡಿ ಪಕ್ಷ ಸಂಘಟನೆಗೆ ಒತ್ತು ನೀಡಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು. ಪ್ರತಿ ರಾಜ್ಯ ಘಟಕಕ್ಕೂ ಅಲ್ಲಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಮೈತ್ರಿ ಸಾಧ್ಯಾಸಾಧ್ಯತೆ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು- ಇತ್ಯಾದಿಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಪಕ್ಷ ಸೇರಲು ಇಚ್ಛಿಸುತ್ತಿರುವವರ ಹಿನ್ನೆಲೆಯನ್ನೂ ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈಗ ರಾಜ್ಯಗಳ ಭೇಟಿಯನ್ನು ಅಮಿತ್ ಶಾ ಆರಂಭಿಸಿದ್ದು, ಅದು ಛತ್ತೀಸ್‌ಗಢದಿಂದ ಆರಂಭವಾಗಿದೆ. ಇನ್ನು 1 ತಿಂಗಳಲ್ಲಿ ಅವರು ಎಲ್ಲ ರಾಜ್ಯಗಳ ಪ್ರವಾಸ ಮುಗಿಸಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇರುವ ಕರ್ನಾಟಕ ಹಾಗೂ ಬಿಎಸ್‌ಪಿ-ಎಸ್‌ಪಿ ಮೈತ್ರಿ ಇರುವ ಉತ್ತರಪ್ರದೇಶವು ಸವಾಲಿನ ರಾಜ್ಯಗಳು ಎಂದು ಬಿಜೆಪಿ ಪರಿಗಣಿಸಿದ್ದು, ಇವುಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ.
