ಆರ್ ಆರ್ ನಗರದಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತಾ ಬಿಜೆಪಿ?

BJP loose victory in RR Nagara Election
Highlights

ಸುಲಭವಾಗಿ ಗೆಲ್ಲುವ ರಾಜರಾಜೇಶ್ವರಿನಗರ ಕ್ಷೇತ್ರವನ್ನು ಪಕ್ಷ ತಾನಾಗಿಯೇ ಕಳೆದುಕೊಂಡಿತೆ ಎಂಬ ಪ್ರಶ್ನೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಬಲವಾಗಿ ಕೇಳಿಬಂದಿದೆ.

ಬೆಂಗಳೂರು (ಜೂ. 01): ಸುಲಭವಾಗಿ ಗೆಲ್ಲುವ ರಾಜರಾಜೇಶ್ವರಿನಗರ ಕ್ಷೇತ್ರವನ್ನು ಪಕ್ಷ ತಾನಾಗಿಯೇ ಕಳೆದುಕೊಂಡಿತೆ ಎಂಬ ಪ್ರಶ್ನೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಬಲವಾಗಿ ಕೇಳಿಬಂದಿದೆ.

ಪಕ್ಷದ ಬೆಂಗಳೂರಿನ ನಾಯಕರು ಕೇವಲ ಹೇಳಿಕೆಗಳನ್ನು ನೀಡಲು ಆದ್ಯತೆ ನೀಡಿದರೆ ಹೊರತು ತಳಮಟ್ಟದಲ್ಲಿ ಪ್ರಚಾರ ನಡೆಸುವಲ್ಲಿ ಹಾಗೂ ಕಾಂಗ್ರೆಸ್‌ ವಿರೋಧಿ ಅಲೆಯನ್ನು ಮತದಾರರ ಮುಂದೆ ಪ್ರಬಲವಾಗಿ ಬಿಂಬಿಸುವಲ್ಲಿ ವಿಫಲರಾದರು ಎಂಬ ಬೇಸರದ ಮಾತುಗಳು ಕೇಳಿಬರುತ್ತಿವೆ.

ಈ ಹಿಂದೆ ನಿಗದಿಯಾಗಿದ್ದಂತೆ ಇದೇ ತಿಂಗಳ 12ರಂದು ಮತದಾನ ನಡೆದಿದ್ದರೆ ಆಗ ಫಲಿತಾಂಶ ಏನೇ ಹೊರಬಿದ್ದರೂ ಮುಖ್ಯವಾಗುತ್ತಿರಲಿಲ್ಲ. ಆದರೆ, ಮೇ 28ಕ್ಕೆ ಮುಂದೂಡಿಕೆಯಾಗಿದ್ದರಿಂದ ಕಾಲಾವಕಾಶ ಇತ್ತು. ಸಾರ್ವತ್ರಿಕ ಚುನಾವಣೆ ವೇಳೆ ಈ ಕ್ಷೇತ್ರದ ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲ ಎಂಬ ಸಬೂಬು ಹೇಳಬಹುದಿತ್ತು. ಈಗ ಸಾಕಷ್ಟುಸಮಯ ಸಿಕ್ಕರೂ ರಾಜ್ಯ ನಾಯಕರು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲಿಲ್ಲ. ವಿವಿಧ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಬಿಜೆಪಿಯ ಪ್ರಮುಖ ನಾಯಕರಾದ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ಪೈಕಿ ಸದಾನಂದಗೌಡರನ್ನು ಕೊನೆಯ ಹಂತದಲ್ಲಿ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು.

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೇ ನಿರ್ಣಾಯಕರಾಗಿದ್ದರು. ಅಭ್ಯರ್ಥಿ ಮುನಿರಾಜುಗೌಡ ಕೂಡ ಅದೇ ಸಮುದಾಯಕ್ಕೆ ಸೇರಿದವರು. ಆದರೆ, ಆರಂಭದಿಂದಲೂ ಆ ಸಮುದಾಯಕ್ಕೆ ಸೇರಿದ ಅಶೋಕ್‌ ಅವರು ಮಾತ್ರ ಈ ಕ್ಷೇತ್ರದ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಮುನಿರಾಜುಗೌಡ ಅವರಿಗೆ ಟಿಕೆಟ್‌ ನೀಡಿರುವುದು ಅಶೋಕ್‌ ಅವರಿಗೆ ಇಷ್ಟವಿರಲಿಲ್ಲ. ಯುವ ನಾಯಕರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕಾಗಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಸಲಹೆ ಮೇರೆಗೆ ಅಭ್ಯರ್ಥಿಯನ್ನಾಗಿಸಲಾಗಿತ್ತು ಎಂಬ ಮಾಹಿತಿ ಪಕ್ಷದ ವಲಯದಿಂದಲೇ ಹೊರಬಿದ್ದಿದೆ.

ವಿಚಿತ್ರ ಸಂಗತಿ ಎಂದರೆ, ಅಶೋಕ್‌ ಅವರೂ ಇದೇ ಕ್ಷೇತ್ರದ ಮತದಾರರು. ಕ್ಷೇತ್ರದ ವ್ಯಾಪ್ತಿಯಲ್ಲಿನ ಜಾಲಹಳ್ಳಿ ಪ್ರದೇಶದಲ್ಲೇ ಅಶೋಕ್‌ ಅವರ ನೆಲೆ ಇದೆ. ಆದರೆ, ಜಾಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಬಿಜೆಪಿಗೆ ಕಡಿಮೆ ಮತಗಳು ಲಭಿಸಿವೆ. ಜಾಲಹಲ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್‌ಎಂಟಿ ಬಡಾವಣೆ, ಲಗ್ಗೆರೆ ಮತ್ತಿತರ ಪ್ರದೇಶಗಳಲ್ಲಿ ಅಶೋಕ್‌ ಅವರ ಪ್ರಭಾವವಿದೆ. ಆ ಪ್ರದೇಶಗಳಲ್ಲೇ ಬಿಜೆಪಿಗೆ ಕಡಿಮೆ ಮತಗಳು ಲಭಿಸಿರುವುದು ಸಹಜವಾಗಿಯೇ ಪಕ್ಷದಲ್ಲಿ ಚರ್ಚಾಸ್ಪದ ವಿಷಯವಾಗಿ ಪರಿಣಮಿಸಿದೆ. 

loader