ಲೋಕಸಭಾ ಚುನಾವಣೆ : ಮೂರು ತಂಡವಾದ ಬಿಜೆಪಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 7:51 AM IST
BJP Leaders To Tour  All Lok Sabha Constituency
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳು ತಯಾರಿ ಆರಂಭ ಮಾಡಿವೆ. ಬಿಜೆಪಿ ನಾಯಕರು ಮೂರು ತಂಡಗಳಾಗಿದ್ದಾರೆ. ಈ ಮೂಲಕ ಗುರುವಾರದಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. 

ಬೆಂಗಳೂರು: ಲೋಕಸಭಾ ಚುನಾವಣೆಗೆ ಪ್ರಾಥಮಿಕ ಹಂತದ ಸಿದ್ಧತೆ ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಗುರುವಾರದಿಂದ ರಾಜ್ಯ  ಪ್ರವಾಸ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಒಟ್ಟು 3 ತಂಡಗಳು ಏಕಕಾಲದಲ್ಲಿ ಪ್ರವಾಸ ಆರಂಭಿಸಲಿವೆ. 

ಯಡಿಯೂರಪ್ಪ ನೇತೃತ್ವದ ತಂಡ ಬೀದರ್‌ನಿಂದ, ಶೆಟ್ಟರ್ ತಂಡ ಶಿವಮೊಗ್ಗದಿಂದ ಮತ್ತು ಈಶ್ವರಪ್ಪ ತಂಡ ಮಂಡ್ಯದಿಂದ ಪ್ರವಾಸ ಆರಂಭಿಸಲಿದ್ದು, ಮೂರು ತಂಡ ಗಳಿಗೂ ವಿವಿಧ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ನಾಯಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲು ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿನ ಪಕ್ಷದ ಪರಿಸ್ಥಿತಿಯ ಅವಲೋಕನ ನಡೆಸುವುದು ಈ ಪ್ರವಾಸದ ಉದ್ದೇಶವಾಗಿದೆ.  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲೇ ಈ ಪ್ರವಾಸ ನಿಗದಿಯಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವುದರ ಜೊತೆಗೆ ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶ, ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಒಡೆದಾಳುವ ನೀತಿ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಯಡಿಯೂರಪ್ಪ ಅವರ ತಂಡ ಈ ತಿಂಗಳ 16 ರವರೆಗೆ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು ಮಹಾನಗರ, ಬೆಂಗಳೂರು ನಗರ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಈ ತಂಡದಲ್ಲಿ ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಮತ್ತು ಎನ್.ರವಿಕುಮಾರ್ ಅವರಿದ್ದಾರೆ.

ಜಗದೀಶ್ ಶೆಟ್ಟರ್ ಅವರ ತಂಡ 13 ರವರೆಗೆ ಶಿವಮೊಗ್ಗ,  ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಮಹಾನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದೆ. ಅರವಿಂದ್ ಲಿಂಬಾವಳಿ ಮತ್ತು ಆರ್.ಅಶೋಕ್ ಅವರನ್ನು ಒಳಗೊಂಡಿದೆ. ಈಶ್ವರಪ್ಪ ನೇತೃತ್ವದ ತಂಡ ೧೨ರವರೆಗೆ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಸಿ.ಟಿ.ರವಿ, ಲಕ್ಷ್ಮಣ ಸವದಿ, .ನಾರಾಯಣಸ್ವಾಮಿ ಅವರು ತಂಡದಲ್ಲಿರುವ ಇತರ ಮುಖಂಡರು.

loader