ಶಿವಮೊಗ್ಗ : ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಈ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರೆ, ಅನೇಕರು ತಮ್ಮ ಬೆಂಬಲ ಸೂಚಿಸಿದ್ದಾರೆ. 

ದೇಶದ ದೇವಾಲಯಗಳಿಗೆ ಅದರದ್ದೇ ಆದ ಸಂಪ್ರದಾಯಗಳಿವೆ. ಅದನ್ನು ಹಾಳು ಮಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. 

ಮೇಲ್ ಮತ್ತೂರಿನ ದೇಗುಲಕ್ಕೆ ಕೆಂಪು ಸೀರೆ ಉಟ್ಟ ಹೆಣ್ಣು ಮಕ್ಕಳೆ ಭಕ್ತರು. ಶಬರಿಮಲೆ ಅಯ್ಯಪ್ಪನಿಗೆ ಪುರುಷರು ಮಾತ್ರ ಭಕ್ತರು. ಇಂತಹ ಸಂಪ್ರದಾಯಗಳು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.  ದೇಶದಲ್ಲಿ ಧರ್ಮ ,ಸಂಸ್ಕೃತಿಗಳಿಗೆ ಗೌರವ ಕೊಡುತ್ತೇವೆ. ಭಾವನಾತ್ಮಕವಾದ ದೇಶ ನಮ್ಮದು. ಆದ್ದರಿಂದ ನಂಬಿಕೆಗಳಿಗೆ ಮೊದಲು ಗೌರವ ನೀಡಬೇಕು ಎಂದರು. 

ಇನ್ನು ಶಬರಿಮಲೆಗೆ ಹೆಣ್ಣು ಮಕ್ಕಳು ಪ್ರವೇಶ ಮಾಡಿರುವುದು ನೋವು ತಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿ ನಡೆದುಕೊಂಡಿರುವುದು ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ, ನಂಬಿಕೆಗಳಿಗೆ ದ್ರೋಹ ಮಾಡಿದಂತೆ.  ನಮ್ಮ ಧರ್ಮ ಸಂಸ್ಕೃತಿ ಉಳಿಸ ಬೇಕಿದೆ. ನಡೆದು ಕೊಂಡ ಪದ್ಧತಿಗಳನ್ನು ಮುರಿಯುವಂತಹ ವ್ಯವಸ್ಥೆ ಕೆಲವರು ಮಾಡುತ್ತಿರುವ ಹುನ್ನಾರವಿದು.  ಇದು ಹಿಂದೂ ಧರ್ಮಕ್ಕೆ ಮಾಡುತ್ತಿರುವ ದ್ರೋಹ ಎಂದು ಈಶ್ವರಪ್ಪ ಹೇಳಿದ್ದಾರೆ. 

ಅಲ್ಲದೇ  ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಧರ್ಮವನ್ನು ಹಾಳು ಮಾಡಲು ಎಲ್ಲಿಯೂ ಹೇಳಿಲ್ಲ. ಕಮ್ಯೂನಿಸ್ಟರು , ಕಾಂಗ್ರೆಸ್ ನವರು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ತಡೆಯುವ ಪ್ರಯತ್ನ ನಡೆಸಿದ್ದಾರೆ. ಇವರಿಗೆ ಬೇಕಾದ್ದನ್ನು ತಡೆಯುವುದು , ಬೇಡವಾದ್ದದನ್ನು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.