ಬೆಂಗಳೂರು[ಆ.04]: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಹೊರತುಪಡಿಸಿ 14 ದಿನಗಳವರೆಗೆ ಬೇರೆ ಯಾರೂ ಸಹ ಸಚಿವರಾಗಿರಲಿಲ್ಲ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ ಸುಮಾರು ಒಂದು ತಿಂಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರು ಇರಲಿಲ್ಲ ಎಂಬುದನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಬೇಕು ಎಂದು ಕಾಲೆಳೆದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಸಹಜ. ಸಂಪುಟ ವಿಸ್ತರಣೆ ಮಾಡದಿರುವ ಬಗ್ಗೆ ಅವರು ಹೇಳಿರುವ ಮಾತುಗಳನ್ನು ಸರ್ಕಾರ ಗಮನಿಸುತ್ತದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಇಡೀ ದಿನ ವಿಧಾನಸೌಧದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಮೇವು ಬ್ಯಾಂಕುಗಳ ಸ್ಥಾಪನೆ, ಮೇವು ಬೆಳೆಯಲು ಕ್ರಮ, ಮೇವು ಸಂಗ್ರಹಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ರಾಜ್ಯದ 30 ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಸೂಚನೆ ನೀಡಿದ್ದಾರೆ. ಜನರ ಪರವಾಗಿ ಸರ್ಕಾರ ಸದಾ ಇರುತ್ತದೆ ಎಂದು ಹೇಳಿದರು.