ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಅಕ್ಟೋಬರ್ ತಿಂಗಳ ಒಳಗೆ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ತಿಪಟೂರು :  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಜಾತಕ, ಕುಂಡಲಿ ಚೆನ್ನಾಗಿದ್ದು, ಮುಂದಿನ ಅಕ್ಟೋಬರ್‌ 2ನೇ ವಾರದೊಳಗೆ ಅವರು ರಾಜ್ಯದ ಮುಖ್ಯಮಂತ್ರಿಗಳಾಗುವ ಯೋಗವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಸೋಮೆಕಟ್ಟೆಕಾಡಸಿದ್ದೇಶ್ವರ ಮಠದ ನೂತನ ಶಿಲಾಮಠ ಲೋಕಾರ್ಪಣ ಸಮಾರಂಭದ ನಾಲ್ಕನೇ ದಿನವಾದ ಬುಧವಾರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಯಡಿಯೂರಪ್ಪ ರಾಜ್ಯಕಂಡ ಅತ್ಯುತ್ತಮ ನಾಯಕರಾಗಿದ್ದು, ಎಲ್ಲ ವರ್ಗದ ಜನರಿಗೆ ಸಮಾನತೆ ಕೊಟ್ಟವ್ಯಕ್ತಿಯಾಗಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಬಿಎಸ್‌ವೈ ಅಧಿಕಾರವನ್ನು ಪೂರ್ಣಗೊಳಿಸಲಾಗಲಿಲ್ಲ. ಅವರ ದೂರದೃಷ್ಟಿರಾಜ್ಯದ ಜನರಿಗೆ ಸಮರ್ಪಣೆ ಮಾಡಬೇಕೆಂಬ ಉದ್ದೇಶ ಅವರಲ್ಲಿದೆ. ಆದರೆ ಕೇವಲ 37 ಸ್ಥಾನಗಳನ್ನು ಪಡೆದುಕೊಂಡವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಪವಿತ್ರ ಕ್ಷೇತ್ರಕ್ಕೆ ಯಡಿಯೂರಪ್ಪನವರು ಮತ್ತೊಮ್ಮೆ ಭೇಟಿ ನೀಡುವುದರೊಳಗೆ ಮುಖ್ಯಮಂತ್ರಿಗಳಾಗಿರುತ್ತಾರೆಂಬ ನಂಬಿಕೆಯಿದೆ ಎಂದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಇದ್ದರು.