ಬೆಂಗಳೂರು[ಜು.29]: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನು ಯಾವುದೇ ಬದಲಾವಣೆಯಿಲ್ಲದೆ ಮಂಡಿಸಿ ವಿಧಾನಮಂಡಲ ಉಭಯ ಸದನದಲ್ಲಿ ಅಂಗೀಕಾರ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಭಾನುವಾರ ನಗರದ ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸ ದವಳಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಸೋಮವಾರ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ಹಣಕಾಸು ವಿಧೇಯಕ ಮಂಡಿಸಲಿದ್ದೇನೆ. ಆದರೆ ವಿಧೇಯಕದಲ್ಲಿ ಒಂದಕ್ಷರವನ್ನೂ ಬದಲಿಸುವುದಿಲ್ಲ. ಈ ವಿಷಯವನ್ನು ಈಗಾಗಲೇ ವಿಧಾನಸಭಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನು ಅಂಗೀಕರಿಸುವಂತೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ವೇಳೆ ಸದನದಲ್ಲಿ ಮನವಿ ಮಾಡಿದ್ದರು. ವಿಶ್ವಾಸಮತ ಸಾಧ್ಯವಾಗದೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಮೈತ್ರಿ ಸರ್ಕಾರದ ಹಣಕಾಸು ವಿಧೇಯಕ ಅಂಗೀಕಾರ ಕುರಿತಂತೆ ಅನುಮಾನ ವ್ಯಕ್ತವಾಗಿತ್ತು. ಆದರೆ ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನೇ ಅಂಗೀಕರಿಸಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದರು.