ಈಶ್ವರಪ್ಪನವರ ರಕ್ಷಣೆಗೆ ಬಂದ 'ಹಿಂದ' ಬಲ | ಬ್ರಿಗೇಡ್ ವಿರುದ್ಧ ಕ್ರಮಕ್ಕೆ ವರಿಷ್ಠರ ಮೀನಮೇಷ
ನವದೆಹಲಿ(ಜ. 13): ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ನಿರಂತರವಾಗಿರುವ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರನ್ನು ತಡೆಯುವಂತೆ ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ವರಿಷ್ಠ ಮಂಡಳಿ ಮತ್ತು ಆರೆಸ್ಸೆಸ್'ಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಇರುವ ತರಾತುರಿ ಬಿಜೆಪಿ ಹೈಕಮಾಂಡ್ ಮತ್ತು ಸಂಘಕ್ಕೆ ಇದ್ದಂತೆ ಇಲ್ಲ.
ನವದೆಹಲಿಯಲ್ಲಿ ಸುವರ್ಣನ್ಯೂಸ್ ಜತೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ. ಹೀಗಾಗಿ ನಾವೇನೂ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಬಿಎಸ್'ವೈ ಅಂದುಕೊಂಡಷ್ಟು ಬೇಗ ಈಶ್ವರಪ್ಪನವರ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುವಂತೆ ಕಾಣುತ್ತಿಲ್ಲ. ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದವರೆಗೆ ಸತತವಾಗಿ ದೂರವಾಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಮತ್ತು ಸಂಘದಲ್ಲಿ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುವ ಸಂಘದ ಅಖಿಲ ಭಾರತೀಯ ಸರಕಾರ್ಯವಾಹ ಕೃಷ್ಣಗೋಪಾಲ್'ರೊಂದಿಗೆ ಬಿಎಸ್'ವೈ ಮಾತುಕತೆ ನಡೆಸಿದ್ದರು. ಈಶ್ವರಪ್ಪನವರ ಬ್ರಿಗೇಡ್ ಪಕ್ಷಕ್ಕೆ ಹಾನಿ ಮಾಡುತ್ತಿದೆ ಎಂದು ಮನವರಿಕೆ ಮಾಡಿಕೊಡಲು ಈ ವೇಳೆ ಮುಂದಾದರು.
ಈ ಸಂದರ್ಭದಲ್ಲಿ ಉಭಯ ನಾಯಕರು ‘‘ಯಡಿಯೂರಪ್ಪನವರೇ, ಸ್ವಲ್ಪ ತಾಳ್ಮೆ ಇರಲಿ. ಎಲ್ಲವೂ ಸರಿಯಾಗುತ್ತದೆ ಹಿಂದುಳಿದ ವರ್ಗಗಳ ವಿಷಯ. ಅನಗತ್ಯ ತೊಂದರೆ ಮಾಡಿಕೊಳ್ಳಬೇಡಿ,'' ಎಂದು ಸಲಹೆ ನೀಡಿದ್ದಾರೆ. ಅಮಿತ್ ಶಾ ಪಂಚ ರಾಜ್ಯಗಳ ಟಿಕೆಟ್ ಹಂಚಿಕೆಯಲ್ಲಿ ವ್ಯಸ್ತರಾಗಿದ್ದಾರೆ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಸುಮ್ಮನೆ ಇರುವಂತೆ ಸೂಚ್ಯವಾಗಿ ಹೇಳಿದ್ದಾರೆಯೇ ಹೊರತು ಕ್ರಮ ತೆಗೆದುಕೊಳ್ಳುವ ಬಗ್ಗೆ ಅಥವಾ ಸುಮ್ಮನಿರಿಸುವ ಬಗ್ಗೆ ರಾಮ್‌ಲಾಲ್ ಮತ್ತು ಕೃಷ್ಣಗೋಪಾಲ್ ಚಕಾರವೆತ್ತಿಲ್ಲ. ನಂತರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ‘ಕೇಶವಕೃಪ'ಕ್ಕೆ ಭೇಟಿ ನೀಡಿ ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ ಅವರನ್ನೂ ಮಾಜಿ ಸಿಎಂ ಭೇಟಿ ಮಾಡಿದ್ದರು. ಅವರೂ ಸ್ಪಷ್ಟ ಭರವಸೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಗೊಂದಲ ಹೆಚ್ಚಾಗಿದೆ: ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್'ಮೂರ್ತಿ ವಿರುದ್ಧ ಕ್ರಮ ತೆಗೆದುಕೊಂಡಿದ್ದು ಸರಿಯಲ್ಲ ಇದರಿಂದ ಗೊಂದಲ ಹೆಚ್ಚಾಗಿದೆ ಎಂದು ಮುಕುಂದ್ ಯಡಿಯೂರಪ್ಪನವರಿಗೆ ಹೇಳಿದರು ಎಂದು ತಿಳಿದು ಬಂದಿದೆ. ‘‘ನಾನು ಸಂಘದ ಇತರ ಕರ್ನಾಟಕದ ನಾಯಕರಾದ ಮಂಗೇಶ್ ಬೆಂಡೆ, ಶಂಕರಾನಂದ್ ಮತ್ತು ಅರವಿಂದ್ ರಾವ್ ದೇಶಪಾಂಡೆ ಜೊತೆಗೆ ಚರ್ಚೆ ನಡೆಸಿದ ನಂತರ ಒಂದು ತೀರ್ಮಾನಕ್ಕೆ ಬರುತ್ತೇವೆ,'' ಎಂದರು ಎಂದು ಸ್ವತಃ ಯಡಿಯೂರಪ್ಪನವರ ಆಪ್ತ ಮೂಲಗಳೇ ಸುವರ್ಣನ್ಯೂಸ್'ಗೆ ತಿಳಿಸಿವೆ. ಆದರೆ 3 ದಿನಗಳ ಹಿಂದೆಯೇ ಮುಕುಂದ್'ರನ್ನು ಭೇಟಿ ಮಾಡಿದ್ದ ಈಶ್ವರಪ್ಪ, ‘‘ಹಿಂದುಳಿದ ವರ್ಗಗಳ ಮೋರ್ಚಾದಲ್ಲಿ ಕೆಲಸ ಮಾಡಲು ನನಗೆ ಯಡಿಯೂರಪ್ಪನವರು ಅವಕಾಶ ಕೊಡಲಿಲ್ಲ. ಶಿವಮೊಗ್ಗದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಸ್ಥಳೀಯ ನಾಯಕರಿಗೆ ಹೋದಾಗಲೆಲ್ಲ ಹೇಳುತ್ತಿ ರುತ್ತಾರೆ. ಬರ ಸಮಿತಿಯಿಂದ ದೂರವಿಡುತ್ತಾರೆ. ಹೀಗಿರುವಾಗ ಮೊದಲ ಬಾರಿ ಹಿಂದುಳಿದ ದಲಿತ ನಾಯಕರು ತಾವಾಗಿ ಬಂದು ನೇತೃತ್ವ ವಹಿಸಿ ಎಂದು ಹೇಳುತ್ತಿರುವಾಗ ನಾನು ಇಲ್ಲ ಎನ್ನುವುದು ಸರಿಯೇ? ಇದರಿಂದ ಸಂಘ ಪರಿವಾರಕ್ಕೂ ಕೂಡ ಬ್ರಾಹ್ಮಣರ, ಲಿಂಗಾಯಿತರ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರ ಬಂದಂತೆ ಆಗುತ್ತದೆ. ಈಗ ನಾನು ಬ್ರಿಗೇಡ್ ಕೆಲಸ ನಿಲ್ಲಿಸಿದರೆ ಬಿಜೆಪಿ ಮತ್ತು ಸಂಘ ಪರಿವಾರದ ಬಗ್ಗೆ ಯಾವ ಸಂದೇಶ ಹೋಗಬಹುದು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಿ,'' ಎಂದು ಹೇಳಿ ಬಂದಿದ್ದರು ಎನ್ನಲಾಗುತ್ತಿದೆ.
ಯಡಿಯೂರಪ್ಪ ಜೊತೆಗಿನ ಮಾತುಕತೆ ಯಲ್ಲಿ ಇದನ್ನು ಪ್ರಸ್ತಾಪಿಸಿದ ಮುಕುಂದ್ ‘‘ನೀವಿಬ್ಬರೂ ಕುಳಿತುಕೊಂಡು ಈ ವಿಚಾರ ಬಗೆಹರಿಸಬಹುದು. ಅದನ್ನು ಅನಗತ್ಯ ಉಚ್ಚಾ ಟನೆ ಎಂದೆಲ್ಲ ಹೇಳಿ ಉಲ್ಬಣಿಸುವಂತೆ ಮಾಡ ಬೇಡಿ,'' ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಜೊತೆಗೆ ಪದಾಧಿಕಾರಿಗಳ ಆಯ್ಕೆ ವಿಷಯವನ್ನು ಪ್ರಸ್ತಾಪಿಸಿದ ಸಂಘದ ನಾಯಕರು, ‘‘ಪದಾಧಿಕಾರಿಗಳ ನೇಮಕ ಮಾಡುವಾಗ ಸೌಜನ್ಯಕ್ಕೂ ನೀವು ಸಂಘದ ಹಿರಿಯರೊಂದಿಗೆ ಮಾತನಾಡಿರಲಿಲ್ಲ. ಈಗ ಮಾತ್ರ ಈಶ್ವರಪ್ಪನವರನ್ನು ಕರೆದು ಬುದ್ಧಿ ಹೇಳಿ ಎನ್ನುತ್ತೀರಿ,'' ಎಂದು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು ಎಂದು ಕೂಡ ಸಂಘದ ಮೂಲಗಳು ತಿಳಿಸಿವೆ.
ಬ್ರಿಗೇಡ್ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ದೂರಿನ ನಂತರ ಕಳೆದ ವಾರ ಈಶ್ವರಪ್ಪನವರನ್ನು ಕರೆಸಿ ಮಾತನಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಸ್ಥಳೀಯ ಸಂಘದೊಂದಿಗೆ ಮಾತನಾಡಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಅಮಿತ್ ಶಾ ನೋಡೋಣ ಎಂದು ಹೇಳಿರುವುದೇ ಈಶ್ವರಪ್ಪನವರಿಗೆ ಸದ್ಯಕ್ಕೆ ಜೀವದಾನವಾಗಿದೆ. ಇದರಿಂದಾಗಿ ಪ್ರತಿಷ್ಠೆ ಹೋಗುತ್ತಿದೆ ಎಂದು ಚಿಂತಾಕ್ರಾಂತರಾಗಿರುವ ಯಡಿಯೂರಪ್ಪನವರು ತಮ್ಮ ಸಹಜ ಸ್ವಭಾವದಂತೆ ನಿಂತಲ್ಲಿ ನಿಲ್ಲಂಗಿಲ್ಲ ಕುಂತಲ್ಲಿ ಕೂರಂಗಿಲ್ಲ ಎಂಬಂತೆ ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ. ಈಶ್ವರಪ್ಪನವರ ಸಮರ್ಥನೆಯನ್ನು ಕೇಳಿಸಿಕೊಂಡ ನಂತರ ಅಮಿತ್ ಶಾ ‘‘ಕರ್ನಾಟಕದ ಸಂಘ ನಾಯಕರಾದ ಮಂಗೇಶ್ ಬೆಂಡೆ, ಮುಕುಂದ್, ಶಂಕರಾನಂದ್, ಅರವಿಂದ್ ದೇಶಪಾಂಡೆ ಜೊತೆಗೆ ಮಾತನಾಡುತ್ತೇನೆ. ನಂತರ ನೀವು ಮತ್ತು ಯಡಿಯೂರಪ್ಪ ಇಬ್ಬರನ್ನೂ ಜೊತೆಗೆ ಕರೆಯುತ್ತೇನೆ. ಅಲ್ಲಿಯವರೆಗೆ ವ್ಯತಿರಿಕ್ತ ಹೇಳಿಕೆ ನಿಲ್ಲಿಸಿ,'' ಎಂದು ತಾಕೀತು ಮಾಡಿ ಕಳುಹಿಸಿದ್ದರು. ಹೀಗಾಗಿ ಸಂಘದ ಜೊತೆ ಮಾತನಾಡುವ ಪ್ರಕ್ರಿಯೆ ಮುಗಿಯುವವರೆಗೆ ಈಶ್ವರಪ್ಪ ಚಟುವಟಿಕೆ ನಡೆಸಬಹುದು ಎಂದು ಈಶ್ವರಪ್ಪ ಮತ್ತವರ ಬೆಂಬಲಿಗರು ಅರ್ಥೈಸಿಕೊಂಡಿದ್ದಾರೆ. ಇದು ಯಡಿಯೂರಪ್ಪನವರನ್ನು ಇನ್ನಷ್ಟು ಕೆರಳಿಸುತ್ತಿದೆಯಾದರೂ ಒಂದು ಕಡೆ ಹೈಕಮಾಂಡ್, ಇನ್ನೊಂದು ಕಡೆ ಸಂಘದ ಉದಾಸೀನದ ಕಾರಣ ಸ್ವಲ್ಪ ಮಟ್ಟಿಗೆ ರಾಜ್ಯ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರು ಅಸಹಾಯಕರಾಗಿದ್ದಾರೆ.
ಪ್ರಮುಖ ಪಾತ್ರಧಾರಿ ಸಂತೋಷ್?
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಹಗ್ಗ ಜಗ್ಗಾಟದಲ್ಲಿ ಅತ್ಯಂತ ನಾಜೂಕಿನಿಂದ ತೆರೆಯ ಹಿಂದೆ ನಿಂತು ಸಂಘದ ಮೇಲೆ ಪ್ರಭಾವ ಬೀರುತ್ತಿರುವವರು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಎಂದು ಹೇಳಲಾಗುತ್ತಿದೆ. ರಾಜ್ಯ ಪದಾಧಿಕಾರಿಗಳ ನೇಮಕಾತಿಯಲ್ಲಿ ವಿವಾದವಾದಾಗ ಯಡಿಯೂರಪ್ಪ ಮತ್ತು ಪ್ರಚಾರಕ ಸಂತೋಷ್ ಮಧ್ಯೆ ಮಾತುಕತೆಯೇ ನಿಂತು ಹೋಗಿದೆ ಎನ್ನಲಾಗಿತ್ತು. ಈಶ್ವರಪ್ಪನವರು ಇಷ್ಟೊಂದು ಬಹಿರಂಗವಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಂದು ಚಟುವಟಿಕೆ ನಡೆಸುತ್ತಿರುವುದಕ್ಕೆ ಸಂಘ ಮತ್ತು ದೆಹಲಿ ವಲಯದಲ್ಲಿ ಸಂತೋಷ್ ನೀಡುತ್ತಿರುವ ಅಭಯ ಕಾರಣ ಎಂದು ಬಿಜೆಪಿ ಹಿರಿಯ ನಾಯಕರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸ್ವತಃ ಯಡಿಯೂರಪ್ಪನವರು ಕೂಡ ಇದನ್ನು ಅನೇಕ ಸಲ ತಮ್ಮ ಆಪ್ತರ ಬಳಿ ಅವಲತ್ತುಕೊಂಡಿದ್ದು ಉಂಟು .ಆದರೆ ಕಳೆದ ಒಂದು ದಶಕದ ರಾಜಕಾರಣದಲ್ಲಿ ಸಂತೋಷ್ ಇಲ್ಲಿಯವರೆಗೆ ಮಾಧ್ಯಮಗಳ ಜೊತೆ ಬಹಿರಂಗವಾಗಿ ಎಲ್ಲಿಯೂ ಮಾತನಾಡಿಲ್ಲ.
- ಪ್ರಶಾಂತ್ ನಾತು, ಸುವರ್ಣನ್ಯೂಸ್
epaper.kannadaprabha.in
