ಬೆಂಗಳೂರು[ಜು.24]: ಸರ್ಕಾರ ರಚನೆ ಬಳಿಕ ಕೆಲವೇ ದಿನದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಆದಂತೆ ನಿಮಗೂ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಸದನದಲ್ಲಿ ಮಂಗಳವಾರ ವಿಶ್ವಾಸಮತ ಯಾಚನೆಗೂ ಮುನ್ನ ಮಾತನಾಡಿದ ಅವರು, ಸರ್ಕಾರ ರಚನೆ ಬಳಿಕ ನೈಜ ಚಿತ್ರಣ ಗೊತ್ತಾಗಲಿದೆ. ನಿಮಗೆ ತಿರುಗುಬಾಣವಾಗಲಿದ್ದು, ಬಾಂಬ್‌ ಬೀಳಲು ಆರಂಭವಾಗಲಿದೆ. ಸರ್ಕಾರ ಸುಭದ್ರವಾಗಿರಲಿದೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಡಿ, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಮುಖ್ಯಮಂತ್ರಿಯಾದ ಬಳಿಕ ಸರ್ಕಾರದ ಬೊಕ್ಕಸವನ್ನು ಅನಗತ್ಯವಾಗಿ ವೆಚ್ಚ ಮಾಡಿಲ್ಲ. ಸರ್ಕಾರದಿಂದ ಕಾರು, ಬಂಗಲೆ ತೆಗೆದುಕೊಂಡಿಲ್ಲ, ಭತ್ಯೆ ಮತ್ತು ಪೆಟ್ರೋಲ್‌ ಮೊತ್ತವನ್ನು ಸರ್ಕಾರದಿಂದ ಪಡೆದುಕೊಂಡಿಲ್ಲ. ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ಕೆಲಸ ಮಾಡಿದ್ದೇನೆ. ಮೈತ್ರಿ ಸರ್ಕಾರ ನಾಡಿನ ಅಭಿವೃದ್ಧಿಗಾಗಿ, ಬಡವರ, ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಲೂಟಿ ಸರ್ಕಾರ ಎಂದು ಟೀಕಿಸುವ ಬಿಜೆಪಿ, ಯಾವುದನ್ನು ಲೂಟಿ ಮಾಡಿದ್ದೇವೆ ಎಂದು ದಾಖಲೆಗಳ ಸಮೇತ ಹೇಳಬೇಕು. ಆದರೆ ಬಿಜೆಪಿ ಆಧಾರರಹಿತ ಆರೋಪ ಮಾಡುತ್ತಿದೆ. ಸಮ್ಮಿಶ್ರ ಸರ್ಕಾರವು ಲೂಟಿ ಸರ್ಕಾರವಾಗಲಿ, ನಿರ್ಲಜ್ಜ ಸರ್ಕಾರವಾಗಲಿ ಅಲ್ಲ ತಿರುಗೇಟು ನೀಡಿದರು.

ಫೆಬ್ರವರಿ ತಿಂಗಳಲ್ಲಿ ಕೇಂದ್ರದ ಹಣಕಾಸು ಸಚಿವರು ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯ ಸರ್ಕಾರವು ಅಡ್ಡಿ ಪಡಿಸುತ್ತಿದೆ ಎಂದು ಆರೋಪಿಸಿದರು, ಆದರೆ, 35 ಲಕ್ಷ ರೈತ ಕುಟುಂಬಗಳ ಬಗ್ಗೆ ಯೋಜನೆಯಡಿಯಲ್ಲಿ ಮಾಹಿತಿ ನೀಡಿದರೆ ಕೇವಲ 15 ಲಕ್ಷ ರೈತ ಕುಟುಂಬಗಳಿಗೆ ಮಾತ್ರ ಹಣ ನಿಗದಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನಕ್ಕೆ ಕಾರಣನಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿತ್ತು. ಆಗ ದೆಹಲಿಗೆ ಹೋಗಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತಾವನೆ ತೆಗೆದುಕೊಂಡು ಹೋದರೆ ಎಂದಿಗೂ ಅಸಹಕಾರ ಕೊಡಲಿಲ್ಲ. ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಈಗ ಕಾಂಗ್ರೆಸ್‌ ಜತೆ ಕೈ ಜೋಡಿಸಿ ಸರ್ಕಾರ ರಚಿಸಲಾಗಿದೆ. ದೆಹಲಿಗೆ ಹೋಗಿ ಸಚಿವರನ್ನು ಭೇಟಿ ಮಾಡಿದರೂ ರಾಜ್ಯ ಅಭಿವೃದ್ಧಿಗೆ ಪೂರಕವಾದ ಸ್ಪಂದನೆ ಇಲ್ಲ ಎಂದು ಕಿಡಿಕಾರಿದರು.

ತಾಜ್‌ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ಕೊಠಡಿ ಮಾಡಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಚುನಾವಣೆ ಫಲಿತಾಂಶದ ದಿನದಂದು ಕೊಠಡಿಯಲ್ಲಿದ್ದ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಬ್‌ ನಬಿ ಆಜಾದ್‌ ಅವರು ಕರೆ ಮಾಡಿ ನಿಮಗೆ ಬೆಂಬಲ ಎಂದು ಹೇಳಿದ್ದರು. ಹೀಗಾಗಿ ಅದನ್ನು ಅದೃಷ್ಟದ ಕೊಠಡಿ ಎಂದು ಇಟ್ಟಿಕೊಂಡಿದ್ದೇನೆಯೇ ಹೊರತು ಯಾವುದೇ ರೀತಿಯಲ್ಲೂ ಅವ್ಯವಹಾರಕ್ಕಲ್ಲ. ಅಧಿಕಾರಿಗಳನ್ನು ಕರೆಸಿ ಯಾವುದೇ ಸಭೆಗಳನ್ನು ಸಹ ಮಾಡಿಲ್ಲ ಎಂದು ಬಿಜೆಪಿ ಮುಖಂಡರು ಮಾಡುತ್ತಿದ್ದ ಟೀಕೆಗೆ ಉತ್ತರಿಸಿದರು.

ಒಂದು ವರ್ಷದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 100 ಕೋಟಿ ರು. ನೀಡಲಾಗಿದೆ. ಅತೃಪ್ತರ ಕ್ಷೇತ್ರಗಳಿಗೂ ಅನುದಾನ ನೀಡಲಾಗಿದೆ. ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಇಂಗ್ಲೀಷ್‌ ಕಲಿಕೆಗಾಗಿ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗಿದೆ. 1200 ಕೋಟಿ ರು. ಕಟ್ಟಡಗಳ ನಿರ್ಮಾಣಕ್ಕಾಗಿ ನೀಡಲಾಗಿದೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.