ವಿಧಾನಸಭೆ[ಆ.01]: ‘‘ನನ್ನ ಮುಂದಿಟ್ಟಿದ್ದ ಬೋಗುಣಿಯಲ್ಲಿರುವುದು ಉಪ್ಪಿಟ್ಟು ಎಂದು ತಿಳಿದುಕೊಂಡು ಎರಡು ಸೌಟು ಹಾಕಿಕೊಂಡೆ. ಆದರೆ ಆಮೇಲೆ ಗೊತ್ತಾಯಿತು ಅದು ಉಪ್ಪಿಟ್ಟಲ್ಲ, ತುಪ್ಪ ಎಂದು. ಆದರೆ ತಟ್ಟೆಯಲ್ಲಿ ಹಾಕಿಕೊಂಡ ತುಪ್ಪವನ್ನು ಬಿಡಲು ಮನಸು ಆಗದೆ ಜೋನಿ ಬೆಲ್ಲಕ್ಕೆ ಸೇರಿಸಿ ದೋಸೆ ತಿಂದೆ’’

ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸುವ ಸಂದರ್ಭದಲ್ಲಿ ಕಾಗೇರಿ ಅವರ ಮನೆಗೆ ಉಪಾಹಾರಕ್ಕೆಂದು ಹೋದ ಸಂದರ್ಭದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡವರು ಬಿಜೆಪಿ ಹಿರಿಯ ಮುಖಂಡ ಗೋವಿಂದ ಕಾರಜೋಳ.

ಶಿರಸಿ ಮಾರಿಕಾಂಬ ಜಾತ್ರೆಗೆ ಹೋದ ವೇಳೆ ಕಾಗೇರಿ ಅವರು ತಮ್ಮ ಮನೆಗೆ ಉಪಾಹಾರಕ್ಕೆಂದು ಕರೆದಿದ್ದರು. ಡೈನಿಂಗ್‌ ಟೇಬಲ್‌ ಇಲ್ಲದೇ ಹವ್ಯಕ ಬ್ರಾಹ್ಮಣರ ಪದ್ಧತಿ ಪ್ರಕಾರ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ತಿಂಡಿಗೆ ದೋಸೆ ಮಾಡಿದ್ದರು. ನನ್ನ ಎದುರು ದೊಡ್ಡ ಬೋಗುಣಿ ಇಡಲಾಗಿತ್ತು. ಉಪ್ಪಿಟ್ಟು ಎಂದುಕೊಂಡು ಎರಡು ಸೌಟು ಹಾಕಿಕೊಂಡೆ. ಆದರೆ, ಅದನ್ನು ತಿಂದಾಗ ಅದು ಉಪ್ಪಿಟ್ಟು ಅಲ್ಲ, ತುಪ್ಪ ಎಂದು ಗೊತ್ತಾಯಿತು. ಏನು ಮಾಡಬೇಕೆಂದು ಕಾಗೇರಿ ಅವರನ್ನು ಕೇಳಿದೆ. ತಿಂದುಬಿಡಿ ಎಂದರು. ಕೊನೆಗೆ ಜೋನಿ ಬೆಲ್ಲದಲ್ಲಿ ತುಪ್ಪ ಮಿಕ್ಸ್‌ ಮಾಡಿ ದೋಸೆಗೆ ಸೇರಿಸಿ ಖಾಲಿ ಮಾಡಿದೆ ಎಂದರು.