ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್‌ ಅನಾರೋಗ್ಯ ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಮಿತ್ರ ಪಕ್ಷದ ನಾಯಕ ಸರ್ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗೋವಾ ಬಿಜೆಪಿ ಮೈತ್ರಿಯಲ್ಲಿ ಬಿಕುಕು ಕಾಣಿಸಿಕೊಂಡಿದೆ.

ಪಣಜಿ(ಅ.21): ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದ ಮೇಲೆ ಇದೇ ಮೊದಲ ಬಾರಿಗೆ ಗೋವಾ ಬಿಜೆಪಿ ಮಿತ್ರಕೂಟ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪರ್ರಿಕರ್‌ ಅವರ ಕಾಯಿಲೆಯಿಂದಾಗಿ ನನ್ನ ಹಾಗೂ ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಬಿಜೆಪಿಯ ಮಿತ್ರಪಕ್ಷ ಗೋವಾ ಫಾರ್ವರ್ಡ್‌ ಪಾರ್ಟಿಯ ಮುಖ್ಯಸ್ಥ ವಿಜಯ್‌ ಸರ್ದೇಸಾಯಿ ಅವರು ಶನಿವಾರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಮೇದೋಜೀರಕ ಗ್ರಂಥಿಯ ಸಮಸ್ಯೆಗೆ ಒಳಗಾಗಿ ದೇಶ- ವಿದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಸದ್ಯ ತಮ್ಮ ಗೋವಾ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರ್ರಿಕರ್‌ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ್‌ ತೆಂಡೂಲ್ಕರ್‌ ಹೇಳಿದ ಮಾರನೆಯ ದಿನವೇ ಸರ್ದೇಸಾಯಿ ಈ ಮಾತುಗಳನ್ನು ಆಡಿರುವುದು ಗಮನಾರ್ಹ.

‘ನಾನೊಬ್ಬ ಬೂಟಾಟಿಕೆಯ ವ್ಯಕ್ತಿ ಅಲ್ಲ. ನೇರವಾಗಿ ವಿಷಯ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳ ಅನಾರೋಗ್ಯ ನನ್ನ ಹಾಗೂ ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಗೋವಾ ಕೃಷಿ ಸಚಿವರಾಗಿರುವ ಸರ್ದೇಸಾಯಿ ಸುದ್ದಿಗಾರರಿಗೆ ತಿಳಿಸಿದರು.