ಆಟೋ ಚಾಲಕರಿಗೆ ಬಿಜೆಪಿ ಹತ್ತಾರು ಭರವಸೆ

news | Tuesday, April 10th, 2018
Suvarna Web Desk
Highlights

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಚಾಲಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಟೋ ಚಾಲಕರು ಹಾಗೂ ಇತರೆ ಚಾಲಕರನ್ನು ಒಳಗೊಂಡ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಚಾಲಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಟೋ ಚಾಲಕರು ಹಾಗೂ ಇತರೆ ಚಾಲಕರನ್ನು ಒಳಗೊಂಡ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಸೋಮವಾರ ಯಡಿಯೂರಪ್ಪ ಅವರು ಡಾಲರ್ಸ್‌ ಕಾಲೋನಿಯ ಮನೆಯಿಂದ ಕ್ವೀನ್ಸ್‌ ರಸ್ತೆಯಲ್ಲಿರುವ ಜಸ್ಮಾದೇವಿ ಭವನದವರೆಗೂ ಸೋಮವಾರ ಆಟೋದಲ್ಲೇ ಆಗಮಿಸಿದ ನಂತರ ಆಟೋ ಚಾಲಕರೊಂದಿಗೆ ನಡೆಸಿದ ಸಂವಾದದಲ್ಲಿ ಪಾಲ್ಗೊಂಡರು. ಮಾತನಾಡಿದ ಅವರು, ಮುಂದಿನ ಎರಡು ಮೂರು ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರಣಾಳಿಕೆಯಲ್ಲಿ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.

ಆಟೋ ಚಾಲಕರು ಸಾರಿಗೆ ಸೇವೆ ಸಲ್ಲಿಸುವ ಜತೆಗೆ ಕನ್ನಡ ಅಭಿಮಾನದ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದೀರಿ. ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ ಕನ್ನಡ ಭಾಷೆ ಉಳಿವಿಗೆ ಆಟೋ ಚಾಲಕರ ಪಾತ್ರ ನಿರ್ಣಾಯಕವಾಗಿದೆ. 10 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೂ ದಿನಕ್ಕೆ 300ರಿಂದ 400 ದುಡಿಯುತ್ತಿದ್ದೀರಿ. ನಿಮ್ಮ ಕಷ್ಟಏನೆಂದು ತಿಳಿದಿದ್ದೇನೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಆಟೋ ಚಾಲಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಾಗಿ ಸಂವಾದ ಏರ್ಪಡಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಒಂದು ವರ್ಷದೊಳಗೆ ಬೆಂಗಳೂರಿನಲ್ಲಿರುವ 1.25 ಲಕ್ಷ ಹಾಗೂ ರಾಜ್ಯಾದ್ಯಂತ ಇರುವ 3.5 ಲಕ್ಷ ಆಟೋ ಚಾಲಕರಿಗೆ ನಿವೇಶನ ಅಥವಾ ವಸತಿ ಸಮುಚ್ಚಯ ನಿರ್ಮಿಸಿ ಕನಿಷ್ಠ ಎರಡು ಕೊಠಡಿಗಳ ಮನೆ ನೀಡಲಾಗುವುದು. ಯಾವುದೇ ಷರತ್ತುಗಳಿಲ್ಲದೆ ಆಟೋ ಚಾಲಕರ ಹೆಣ್ಣು ಮಕ್ಕಳನ್ನು ಭಾಗ್ಯಲಕ್ಷ್ಮಿ ಯೋಜನೆಗೆ ಸೇರ್ಪಡೆ ಮಾಡಲಾಗುವುದು. ಆಟೋ ಚಾಲಕರ ವಿಮೆಯನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಈ ಬದಲಾವಣೆಗೆ ಭಯಗೊಂಡಿರುವ ಸಿದ್ದರಾಮಯ್ಯನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತೇನೆ ಎಂಬ ಭಯದಿಂದ ಬಾದಾಮಿಗೆ ಓಡಿ ಹೋಗಿದ್ದಾರೆ. ಕೊಳಗೇರಿಗಳ ಸಮಸ್ಯೆ ಅರಿಯಲು ಸ್ಲಂ ವಾಸ್ತವ್ಯ ಹೂಡಿದರೆ ಮತ್ತು ದಲಿತರ ಮನೆಯಲ್ಲಿ ಊಟ ಮಾಡುವುದನ್ನು ಟೀಕಿಸುವ ಸಿದ್ದರಾಮಯ್ಯನವರು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಬಿಜೆಪಿ ಅಧಿಕಾರವಧಿಯಲ್ಲಿ ಜಾರಿಗೊಂಡಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ರದ್ದುಗೊಳಿಸಿದ ಅಪಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶಿವಾಜಿನಗರ ಕ್ಷೇತ್ರ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ಟೀಕಿಸಿದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಡೈವರ್ಸ್‌ ಯೂನಿಯನ್‌ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ನೂರಾರು ಆಟೋ ಚಾಲಕರು ಪಾಲ್ಗೊಂಡಿದ್ದರು. ಇದೇ ವೇಳೆ ಯಡಿಯೂರಪ್ಪ ಅವರು ಮಾತಿನ ಮಧ್ಯೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಟ್ಟಾಸುಬ್ರಹ್ಮಣ್ಯ ನಾಯ್ಡು ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಆಟೋ ಚಾಲಕರ ಬೇಡಿಕೆಗಳು

- 8,500 ರು. ಇರುವ ಆಟೋ ವಿಮೆಯನ್ನು ಕಡಿಮೆ ಮಾಡಬೇಕು

- ಬಾಂಗ್ಲಾ ಪ್ರಜೆಗಳಿಗೆ ಆಟೋ ಪರವಾನಗಿ, ಪಡಿತರ ಚೀಟಿ ನೀಡಿರುವುದರಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು

- ಉಬರ್‌, ಓಲಾದಿಂದ ಆಟೋ ಚಾಲಕರಿಗೆ ಹೊಡೆತ ಬಿದ್ದಿದ್ದು, ಅವುಗಳನ್ನು ಕೂಡಲೇ ರದ್ದುಗೊಳಿಸಬೇಕು

- ಆಟೋಗಳಿಗೆ ಬಳಸಲಾಗುವ ಗ್ಯಾಸ್‌ ದರ ಕಡಿಮೆ ಮಾಡಬೇಕು

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಪಶು ಆಹಾರ ಉತ್ಪಾದನಾ ಘಟಕ ಆರಂಭಿಸುವುದಾಗಿ ಹೇಳಿರುವ ಬಿ.ಎಸ್‌.ಯಡಿಯೂರಪ್ಪ, ನೀರಾವರಿಗಾಗಿ 1 ಲಕ್ಷ ಕೋಟಿ ರು. ಮೀಸಲು, ಬೆಳೆಗಳ ದರ ಕುಸಿದಾಗ ರೈತರಿಗೆ ಬೆಂಬಲವಾಗಿ ನಿಲ್ಲಲು 3000 ಕೋಟಿ ರು. ಆವರ್ತ ನಿಧಿ, ರೈತರ ಪಂಪ್‌ ಸೆಟ್‌ಗಳಿಗೆ ಕನಿಷ್ಠ 12 ಗಂಟೆ ವಿದ್ಯುತ್‌ ಸೇರಿ ಹಲವಾರು ಭರವಸೆ ನೀಡಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk