ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ | ವರಿಷ್ಠರ ಭೇಟಿಗೆ ನಿರ್ಧಾರ ಸಂಭವ | ಈಶ್ವರಪ್ಪ ಭಾಗಿ ಸಾಧ್ಯತೆ

ಬೆಂಗಳೂರು (ಏ.26): ಪದಾಧಿಕಾರಿಗಳ ನೇಮಕ ಕುರಿತಂತೆ ಬಿಜೆಪಿಯಲ್ಲಿ ಹಲವು ತಿಂಗಳುಗಳಿಂದ ಮುಂದುವರೆದಿರುವ ಬಿಕ್ಕಟ್ಟು ಮತ್ತೊಮ್ಮೆ ಬೀದಿಗೆ ಬರಲಿದ್ದು, ಗುರುವಾರ ಅತೃಪ್ತ ಮುಖಂಡರು ಬಹಿರಂಗ ಸಭೆ ಆಯೋಜಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿನ ಕಿಂಗ್ಸ್‌ ಕೋರ್ಟ್‌ ಎಂಬ ವಿಶಾಲವಾದ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಆಯೋಜಿಸಲಾಗಿರುವ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ಮುಖಂಡರೂ ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ನಂತರ ಪದಾಧಿಕಾರಿಗಳ ನೇಮಕ ಕುರಿತ ಲೋಪದೋಷ ಸರಿಪಡಿಸುವಂತೆ ಒತ್ತಾಯಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿ ಮಾಡಲು ದೆಹಲಿಗೆ ನಿಯೋಗ ತೆರಳುವ ಬಗ್ಗೆ ಒಕ್ಕೊರಲ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ವಿಧಾನಪರಿಷತ್‌ ಸದಸ್ಯರಾದ ಎಂ.ಬಿ.ಭಾನು ಪ್ರಕಾಶ್‌, ಸೋಮಣ್ಣ ಬೇವಿನಮರದ, ಮಾಜಿ ಸಚಿವ ರಾದ ಸೊಗಡು ಶಿವಣ್ಣ, ಎಸ್‌.ಎ.ರವೀಂದ್ರನಾಥ್‌, ಮಾಜಿ ಶಾಸಕರಾದ ನಿರ್ಮಲಕುಮಾರ್‌ ಸುರಾನಾ, ಸಿದ್ದರಾಜು, ನಾರಾಯಣಸಾ ಭಾಂಡಗೆ, ಮೊದಲಾದ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಈಶ್ವರಪ್ಪ ಭಾಗಿ ನಿರೀಕ್ಷೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರೂ ಭಾಗವಹಿಸುವ ನಿರೀಕ್ಷೆ ಯಿದೆ. ತಮ್ಮನ್ನು ಸಭೆಗೆ ಆಹ್ವಾನಿಸಿದಲ್ಲಿ ಪಾಲ್ಗೊಳ್ಳುವೆ ಎಂದು ಈಗಾಗಲೇ ಈಶ್ವರಪ್ಪ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಸಭೆಗೆ ಆಹ್ವಾನಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ಬುಧವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಮುನ್ನವೇ ಈ ಅತೃಪ್ತ ಮುಖಂಡರು ಸಭೆ ಸೇರಿ ದೆಹಲಿಗೆ ತೆರಳಲು ಉದ್ದೇಶಿಸಿದ್ದರು. ಆದರೆ, ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮುಂದೂಡಿದರು. ಇದೀಗ ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಸೋಲುಂಡಿರುವುದರಿಂದ ಅತೃಪ್ತ ಮುಖಂಡರ ಧ್ವನಿ ಗಟ್ಟಿಯಾದಂತಾಗಿದೆ.

ಇದೇ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳೆದ ಜನವರಿ ಅಂತ್ಯದಲ್ಲಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವೆ ಸಂಧಾನ ಸಭೆ ನಡೆದಿತ್ತು. ಆ ಸಭೆಯಲ್ಲಿ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ರಾಜಕೀಯ ಚಟುವಟಿಕೆಗಳನ್ನು ಕೈಬಿಡಲು ಒಪ್ಪಿಕೊಂಡಿದ್ದರು. ಅಲ್ಲದೆ, ಪದಾಧಿಕಾರಿಗಳ ಕುರಿತ ಅಪಸ್ವರ ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನೂ ಒಳಗೊಂಡಂತೆ ನಾಲ್ವರ ಉನ್ನತ ಮಟ್ಟದ ಸಮಿತಿ ರಚಿಸಿ ಫೆ.10ರೊಳಗಾಗಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಅಂದಿನಿಂದ ಇಲ್ಲಿವರೆಗೆ ಆ ಸಮಿತಿ ಸಭೆಯೇ ನಡೆದಿಲ್ಲ.