Asianet Suvarna News Asianet Suvarna News

‘ಮಂಗಳೂರು ಚಲೋ’ಗೆ ಸಿಕ್ಕಿಲ್ಲ ಅನುಮತಿ: ಅನುಮತಿ ಸಿಗದಿದ್ದರು ರ್ಯಾಲಿ ನಡೆಸಲಿದೆ ಬಿಜೆಪಿ!

ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ. ಬೈಕ್​ ರ್ಯಾಲಿಯನ್ನು ಶತಾಯಗತಾಯ ಹತ್ತಿಕ್ಕಲೇಬೇಕೆಂಬ ಹಠಕ್ಕೆ ರಾಜ್ಯ ಸರ್ಕಾರ ಬಿದ್ದಿದ್ದರೆ, ರ್ಯಾಲಿ ನಡೆಸಿಯೇ ತೀರಲು ಬಿಜೆಪಿ ಜಿದ್ದಿಗೆ ಬಿದ್ದಿದೆ.

BJP Did not get the permission for bike rally

ಬೆಂಗಳೂರು(ಸೆ.05): ಸೆಪ್ಟೆಂಬರ್ 7ರಂದು ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಯೋಜನೆಗೊಂಡಿರುವ ಸಮಾವೇಶಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್​ ರ್ಯಾಲಿ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ಹಾಗೂ ಮಂಗಳೂರು ಪೊಲೀಸ್​ ಆಯುಕ್ತರು ಈಗಾಗಲೇ ಬೈಕ್​ ರ್ಯಾಲಿಗೆ ಅನುಮತಿ ನೀಡಿಲ್ಲ. ಇತ್ತ ಬೆಂಗಳೂರು ಪೊಲೀಸ್ ಕಮಿಷನರ್ ಕೂಡ ಅನುಮತಿಗೆ ನಿರಾಕರಿಸಿದ್ದು, ಕಾನೂನು ಉಲ್ಲಂಘಿಸಿದಸರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಆದರೂ ಇಂದು ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್'​ನಿಂದ ಱಲಿ ಆರಂಭಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಇನ್ನೊಂದೆಡೆ ರ್ಯಾಲಿಗೆ ತೆರಳುವ ಮಾರ್ಗ ಮಧ್ಯೆ ಊಟೋಪಹಾರಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್'​ಗಳನ್ನು ಅಳವಡಿಸಿ ಅಡ್ಡಿಪಡಿಸಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಹೊರಡುವ ರ್ಯಾಲಿ ಹಾಸನ, ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ತಲುಪುವ ಯೋಜನೆ ಹಾಕಿಕೊಂಡಿದೆ. ಆದ್ರೆ ಪೊಲೀಸರಿಂದ ತಡೆ ವ್ಯಕ್ತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ಚಿಂತನೆಯಲ್ಲೂ  ಬಿಜೆಪಿ ನಾಯಕರಿದ್ದಾರೆ. ಒಟ್ನಲ್ಲಿ ರ್‍ಯಾಲಿ ನಡೆಸಿಯೇ ತೀರುತ್ತೇವೆ ಎಂದು ಬಿಜೆಪಿ ಪಣತೊಟ್ಟರೆ, ಇತ್ತ ರ್ಯಾಲಿ ತಡೆಗೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ಏನಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​.

Follow Us:
Download App:
  • android
  • ios