Asianet Suvarna News Asianet Suvarna News

ಲೋಕಸಭೆ ಜೊತೆಗೆ 11 ರಾಜ್ಯಗಳಲ್ಲಿಯೂ ಚುನಾವಣೆ?

ಈಗಾಗಲೇ ಲೋಕಸಭೆಗೆ ಚುನಾವಣೆ ಸಿದ್ಧತೆ  ಮಾಡಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಭರ್ಜರಿ ಜಯಭೇರಿ ಬಾರಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ. ಲೋಕಸಭಾ ಚುನಾವನೆ ಜೊತೆಗೆ ೧೧ ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಲೆಕ್ಕಾಚಾರ ಹಾಕುತ್ತಿದೆ. 

BJP Considering Holding Simultaneous Poll in 11 States
Author
Bengaluru, First Published Aug 14, 2018, 8:18 AM IST

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ಹಲವು ದಿನಗಳಿಂದ ಬೆಂಬಲಿಸಿಕೊಂಡೇ ಬಂದಿರುವ ಬಿಜೆಪಿ, ಇದೀಗ ಈ ಪ್ರಸ್ತಾಪವನ್ನು ಸ್ವತಃ ತನ್ನ ಆಡಳಿತದ ರಾಜ್ಯಗಳ ಮೂಲಕವೇ ಜಾರಿಗೆ ತರಲು ನಿರ್ಧರಿಸಿದೆ. ಅಂದರೆ 2019ರ ಲೋಕಸಭಾ ಚುನಾವಣೆಯ ಜೊತೆಜೊತೆಗೇ ತಾನು ಆಡಳಿತ ನಡೆಸುತ್ತಿರುವ 8-10 ರಾಜ್ಯಗಳಲ್ಲೂ ವಿಧಾನಸಭಾ ಚುನಾವಣೆ ನಡೆಸುವ ಮೂಲಕ, ದೊಡ್ಡ ಮಟ್ಟದಲ್ಲಿ ಜಯಭೇರಿ ಬಾರಿಸಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಇರುವ ಜನಾಭಿಪ್ರಾಯ ಅನ್ವಯ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಮನಗಂಡಿರುವ ಬಿಜೆಪಿ, ಇದೇ ಅವಧಿಯಲ್ಲಿ ವಿಧಾನಸಭಾ ಚುನಾವಣೆಗಳನ್ನೂ ನಡೆಸಿ, ಮೋದಿ ಪ್ರಭಾವದಿಂದ ಅಲ್ಲೂ ಗೆಲುವು ಸಾಧಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಬಿಜೆಪಿ ಇಂಥದ್ದೊಂದು ಕಾರ್ಯತಂತ್ರ ವಿಪಕ್ಷಗಳಿಂದ ಭಾರೀ ವಿರೋಧಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶೇಷವೆಂದರೆ ಸೋಮವಾರವಷ್ಟೇ ಕೇಂದ್ರ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ತಮ್ಮ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ್ದರು.

ಕಾರ್ಯತಂತ್ರ ಏಕೆ?: 2019ರ ಆರಂಭದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಪ್ರಧಾನಿ ಮೋದಿ ಮ್ಯಾಜಿಕ್‌ನೊಂದಿಗೆ ತಾನು ಅಧಿಕಾರಕ್ಕೆ ಬರುವುದು ಖಚಿತ ಎಂಬ ನಂಬಿಕೆಯಲ್ಲಿ ಬಿಜೆಪಿ ಇದೆ. ಆದರೆ ರಾಜ್ಯಗಳ ವಿಧಾನಸಭೆಯಲ್ಲಿ ಮೋದಿ ಮ್ಯಾಜಿಕ್‌ ಅಷ್ಟಾಗಿ ಪರಿಣಾಮ ಬೀರುವುದರ ಬಗ್ಗೆ ಬಿಜೆಪಿಗೆ ಸ್ವಲ್ಪ ಅನುಮಾನವಿದೆ. ಹೀಗಾಗಿ ಲೋಕಸಭೆಯ ಚುನಾವಣೆಯಲ್ಲಿ ಮೋದಿ ಬಿರುವ ಪ್ರಭಾವವನ್ನು, ರಾಜ್ಯ ವಿಧಾನಸಭೆಗೂ ಬಳಸಿಕೊಂಡರೆ, ಹೆಚ್ಚಿನ ಪ್ರಮಾಣದಲ್ಲಿ ಲೋಕಸಭಾ ಸ್ಥಾನ ಗೆಲ್ಲುವುದರ ಜೊತೆಗೆ ರಾಜ್ಯಗಳ ವಿಧಾನಸಭೆಯನ್ನೂ ಕೈವಶ ಮಾಡಿಕೊಳ್ಳಬಹುದು ಎನ್ನವುದು ಬಿಜೆಪಿ ಚಿಂತನೆ ಎನ್ನಲಾಗಿದೆ.

ಕಾರ್ಯತಂತ್ರ ಹೇಗೆ?:

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ 2019ರ ಜನವರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಈ ರಾಜ್ಯಗಳಲ್ಲಿ ಕೆಲ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಈ ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆ ಜೊತೆ ನಡೆಯುವಂತೆ ನೋಡಿಕೊಳ್ಳುವುದು. ಇನ್ನು ಕಾಂಗ್ರೆಸ್‌ ಆಡಳಿತದ ಮಿಜೋರಂ ಸರ್ಕಾರದ ಅವಧಿ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, ಇಲ್ಲಿಯೂ ರಾಷ್ಟ್ರಪತಿ ಆಳ್ವಿಕೆ ಮೂಲಕ ಲೋಕಸಭೆ ಜೊತೆ ಚುನಾವಣೆಗೆ ಸಜ್ಜು ಮಾಡುವುದು.

ಉಳಿದಂತೆ ಬಿಜೆಪಿ ಆಡಳಿತ ಇರುವ ಹರ್ಯಾಣ, ಜಾರ್ಖಂಡ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಂದಿನ ವರ್ಷಾಂತ್ಯಕ್ಕೆ ನಡೆಯಬೇಕಿರುವ ವಿಧಾನಸಭಾ ಚುನಾವಣೆಯನ್ನು ಹಿಂದೂಡುವ ಮೂಲಕ ಲೋಕಸಭೆ ಜೊತೆಗೆ ಇಲ್ಲಿಯೂ ಚುನಾವಣೆ ನಡೆಸುವಂತೆ ನೋಡಿಕೊಳ್ಳುವುದು.

ಇನ್ನು ಏಕ ಚುನಾವಣೆ ಬೆಂಬಲಿಸುವ ಬಿಹಾರದ ನಿತೀಶ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡು, 2020ಕ್ಕೆ ಅಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಯನ್ನು 2019ಕ್ಕೆ ಹಿಂದೂಡುವುದು ಬಿಜೆಪಿಯ ಉದ್ದೇಶ.

ಇದರ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಲ್ಲಿ ಹೇಗಿದ್ದರೂ, ಲೋಕಸಭಾ ಚುನಾವಣೆಯ ಜೊತೆಗೇ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗೆ ಒಟ್ಟಾರೆ 11 ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಲೋಕಸಭಾ ಚುನಾವಣೆ ಜೊತೆಗೇ ನಡೆಸುವ ಬಗ್ಗೆ ಪಕ್ಷದ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಸದ್ಯ ದೇಶದಲ್ಲಿ 15 ರಾಜ್ಯಗಳಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಗಳನ್ನು ಹೊಂದಿದೆ. ಇದರ ಜೊತೆಗೆ 4 ರಾಜ್ಯಗಳಲ್ಲಿ ಆಡಳಿತಾರೂಢ ಸರ್ಕಾರದ ಭಾಗವಾಗಿದೆ.

ಬಿಜೆಪಿ ಲೆಕ್ಕಾಚಾರ

1. ಬಿಜೆಪಿ ಆಡಳಿತದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಮುಂದಿನ ಜನವರಿಯಲ್ಲಿ ಚುನಾವಣೆ ನಡೆಯಬೇಕಿದೆ. ಇಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲು ಶಿಫಾರಸು ಮಾಡಿ ಚುನಾವಣೆ ಮುಂದೂಡುವುದು

2. ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ನಲ್ಲಿ 2019ರ ಅಂತ್ಯಕ್ಕೆ ಚುನಾವಣೆ ನಡೆಯಬೇಕಿದೆ. ಅಲ್ಲಿ ಬೇಗನೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಯುವಂತೆ ಶಿಫಾರಸು ಮಾಡುವುದು

3. ಕಾಂಗ್ರೆಸ್‌ ಆಡಳಿತವಿರುವ ಮಿಜೋರಂ ಸರ್ಕಾರದ ಅವಧಿ ಇದೇ ಡಿಸೆಂಬರ್‌ಗೆ ಕೊನೆಗೊಳ್ಳಲಿದ್ದು, ಅದನ್ನೂ ಲೋಕಸಭೆ ಚುನಾವಣೆ ಜೊತೆಗೇ ನಡೆಸುವಂತೆ ಶಿಫಾರಸು ಮಾಡಲು ಒತ್ತಡ ಹೇರುವುದು

3. ಬಿಹಾರದಲ್ಲಿ 2020ಕ್ಕೆ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಮಿತ್ರ ಪಕ್ಷ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮನವೊಲಿಸಿ ಚುನಾವಣೆಯನ್ನು 2019ಕ್ಕೆ ಹಿಂದೂಡುವಂತೆ ಶಿಫಾರಸು ಮಾಡಿಸುವುದು

4. ಇದಲ್ಲದೆ, ಲೋಕಸಭೆ ಚುನಾವಣೆ ಸಂದರ್ಭದಲ್ಲೇ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳ ವಿಧಾನಸಭೆ ಅವಧಿ ಮುಗಿಯುತ್ತದೆ. ಹಾಗಾಗಿ, ಅಲ್ಲಿ ಲೋಕಸಭಾ ಚುನಾವಣೆ ವೇಳೆಗೇ ವಿಧಾನಸಭೆಗೂ ಚುನಾವಣೆ ನಡೆಯುತ್ತದೆ

5. ಹೀಗೆ, ಲೋಕಸಭೆ ಚುನಾವಣೆಯ ಜೊತೆಗೆ ಕನಿಷ್ಠ 11 ರಾಜ್ಯಗಳ ಚುನಾವಣೆ ಏಕಕಾಲಕ್ಕೆ ನಡೆಯುವಂತೆ ನೋಡಿಕೊಂಡು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಲಾಭ ಪಡೆಯುವುದು ಬಿಜೆಪಿಯ ಲೆಕ್ಕಾಚಾರ

Follow Us:
Download App:
  • android
  • ios