ನವದೆಹಲಿ: ಲೋಕಸಭೆ ಸ್ಥಾನ ಹೊಂದಾಣಿಕೆ ವಿಚಾರವಾಗಿ ಬಿಹಾರದಲ್ಲಿ ತನ್ನ ಮಿತ್ರ ಪಕ್ಷ ಜೆಡಿಯು ಜತೆ ಸಂಘರ್ಷಕ್ಕೆ ಇಳಿದಿದ್ದ ಬಿಜೆಪಿ ಇದೀಗ ಸೀಟು ಹಂಚಿಕೆಯನ್ನು ಸುಸೂತ್ರವಾಗಿ ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ.

ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ತಪ್ಪಿಸುವ ಸಲು ವಾಗಿ ಪ್ರತಿಪಕ್ಷಗಳು ಮಹಾಘಟಬಂಧನ ರೂಪಿಸುವ ಪ್ರಯತ್ನದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ತನ್ನ ಪ್ರಮುಖ ಮಿತ್ರ ಪಕ್ಷಗಳನ್ನು ಕಳೆದುಕೊಳ್ಳಲು ಇಚ್ಛಿಸದ ಬಿಜೆಪಿ, ಬಿಹಾರದಲ್ಲಿ ತನ್ನ ವಶದಲ್ಲಿದ್ದ ಐದು ಸ್ಥಾನಗಳನ್ನು ತ್ಯಾಗ ಮಾಡಲು ಮುಂದಾಗಿದೆ. ಈಗ ಅಂತಿಮಗೊಂಡಿ ರುವ ಸೂತ್ರದ ಪ್ರಕಾರ, ಬಿಹಾರದ 40 ಸ್ಥಾನಗಳ ಪೈಕಿ 17 ರಲ್ಲಿ ಬಿಜೆಪಿ, 17 ರಲ್ಲಿ ಜೆಡಿಯು ಹಾಗೂ 6 ರಲ್ಲಿ ಲೋಕಜನಶಕ್ತಿ ಪಕ್ಷಗಳು ಸ್ಪರ್ಧೆ ಮಾಡಲಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

2018ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದಿತ್ತು. ಅದರ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ 6 ಹಾಗೂ ಲೋಕಸಮತಾ  ಪಕ್ಷ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ದ್ದವು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಜೆಡಿ ಯು ಕೇವಲ 2 ಸ್ಥಾನಗಳಲ್ಲಷ್ಟೇ ಗೆಲುವು ಕಂಡಿತ್ತು. ಆದರೆ 2015 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು  ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲೂ ತನಗೆ ಹೆಚ್ಚು ಸ್ಥಾನಗಳು ಬೇಕು ಎಂದು ಹಟ ಹಿಡಿದಿತ್ತು.

ಹೀಗಾಗಿ ಜೆಡಿಯು ಕಳೆದುಕೊಳ್ಳಲು ಬಯಸದ ಬಿಜೆಪಿ, ತನ್ನ ವಶದಲ್ಲಿದ್ದ ಐದು ಸೀಟುಗಳನ್ನು ಜೆಡಿಯುಗೆ ಬಿಟ್ಟುಕೊಡಲಿದೆ. ಹೀಗಾಗಿ ಎರಡೂ ಪಕ್ಷಗಳು ತಲಾ 17 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ. ಲೋಕಸಮತಾ ಪಕ್ಷ ಎನ್‌ಡಿಎ ತೊರೆಯುವುದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಆ ಪಕ್ಷಕ್ಕೆ ಯಾವುದೇ ಸೀಟು ನೀಡದೇ ಇರಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.