ಭುವನೇಶ್ವರ, [ಜೂ.23]: ಕಳಪೆ ಕಾಮಗಾರಿ ಮಾಡಿಸಿದ್ದಕ್ಕೆ ಲೋಕೋಪಯೋಗಿ ಕಿರಿಯ ಇಂಜಿನಿಯರ್ ಅವರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಶಿಕ್ಷೆ ನೀಡಿದ್ದ ಬಿಜೆಡಿ ಶಾಸಕ ಸರೋಜ್ ಮೆಹೆರ್ ಅವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಕಳಪೆ ಕಾಮಗಾರಿ ಮಾಡಿಸಿದ್ದಕ್ಕೆ ಎಂಜಿನಿಯರ್ ಜಯಾಕಾಂತ್ ಸಬರ್ ಅವರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಸಿದ್ದರು. ಈ ಘಟನೆ ಜೂನ್ 5 ರಂದು ಪಟ್ನಾಗಢ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿ ಶಾಸಕನ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. 

ಜಯಾಕಾಂತ್ ಸಬರ್  ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ಶಾಸಕ ಮೆಹೆರ್ ಅವರನ್ನು ಬಂಧಿಸುವಂತೆ ಬುಡಕಟ್ಟು ಸಮುದಾಯದ ಜನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಶಾಸಕ ಸರೋಜ್ ಮೆಹೆರ್ ಅವರನ್ನು ಬಂಧಿಸಿದ್ದಾರೆ.

ಇದರಿಂದ ಕೆರಳಿದ ಓಬಿಸಿ ಸಮುದಾಯ, ಸರೋಜ್ ಮೆಹೆರ್ ಅವರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿವೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದೆ. 

 ಮೆಹೆರ್ ಅವರನ್ನು ಬಿಡುಗಡೆ ಮಾಡಿದಲ್ಲಿ ಜೂ.26ರಂದು ನಡೆಯುವ ಅಧಿವೇಶನಕ್ಕೆ ಘೇರಾವ್ ಹಾಕುವುದಾಗಿ ಬುಡಕಟ್ಟು ಸಮುದಾಯ ಎಚ್ಚರಿಕೆ ನೀಡಿದೆ.