ಬೆಂಗಳೂರು :  ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆಯ ಕುರಿತು ಜಾಗೃತಿ ಮೂಡಿಸಲು ಇನ್ನು ಮುಂದೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳು ಕಡ್ಡಾಯವಾಗಿ ಬಯೋಡೀಸೆಲ್‌ ಬಳಸುವಂತೆ ಸುತ್ತೋಲೆ ಹೊರಡಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭಿಸಿ ನಿರ್ವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತಿಗಳ ವಾಹನ ವಿಭಾಗದ ಮುಖ್ಯಸ್ಥರು ಈ ಕೇಂದ್ರಗಳನ್ನು ಸಂಪರ್ಕಿಸಿ ಇನ್ನು ಮುಂದೆ ಬಯೋ ಡೀಸೆಲ್‌ ಬಳಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಯೋಡೀಸೆಲ್‌ ಬಳಸುವ ಬಗ್ಗೆ ಮಾರ್ಗಸೂಚಿ ಸಹ ನೀಡಲಾಗಿದೆ. ಇದರ ಅನುಸಾರ ಪ್ರತಿ ಜಿಲ್ಲೆಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 50-400 ಲೀಟರ್‌ ಬಯೋಡೀಸೆಲ್‌ ಪೂರೈಸಲಿದೆ. ಪ್ರಾರಂಭದಲ್ಲಿ 100 ಲೀಟರ್‌ ಡೀಸೆಲ್‌ಗೆ ಐದು ಲೀಟರ್‌ ಬಯೋಡೀಸೆಲ್‌ ಮಿಶ್ರಣ ಮಾಡಲಾಗುವುದು, ಹಂತ ಹಂತವಾಗಿ ಈ ಪ್ರಮಾಣವನ್ನು ಹೆಚ್ಚಿಸಲಾಗುವುದು. ಬಯೋಡೀಸೆಲ್‌ ಬಳಕೆಯ ಕುರಿತಂತೆ ಜಿ.ಪಂ. ಚಾಲಕರಿಗೆ ಸೂಕ್ತ ತರಬೇತಿ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಜೈವಿಕ ಇಂಧನ ಬಳಕೆ ಕುರಿತು ಜಾಗೃತಿ ಮೂಡಿಸಲು ಮಂಡಳಿ ಉದ್ದೇಶಿಸಿದ್ದು, ಈ ಉದ್ದೇಶಿತ ಕಾರ್ಯ ಯೋಜನೆಯಲ್ಲಿ ಬಳಕೆಯಾಗುವ ಬಯೋಡೀಸೆಲ್‌ ವೆಚ್ಚವನ್ನು ಮಂಡಳಿಯೇ ಭರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.