ಕಳೆದ ವಾರವಷ್ಟೇ ನ್ಯಾಯಾಲಯವು ರಾಕಿ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ತೇನಿ ಯಾದವ್ ಮತ್ತು ರಾಜೇಶ್ ಕುಮಾರ್ ಎಂಬ ಇನ್ನಿಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ಅವರಿಗೂ ಶಿಕ್ಷೆ ವಿಧಿಸಲಾಗಿದೆ.

ಪಾಟ್ನಾ(ಸೆ. 06): ಕಾಲೇಜು ವಿದ್ಯಾರ್ಥಿಯ ಹತ್ಯೆಗೈದ ಪ್ರಕರಣದಲ್ಲಿ ಬಿಹಾರದ ರಾಜಕಾರಣಿಯ ಪುತ್ರನಿಗೆ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಗಯಾ ಜಿಲ್ಲಾ ನ್ಯಾಯಾಲಯವು ರಾಕಿ ಯಾದವ್ ಅಕಾ ರಾಕೇಶ್ ಕುಮಾರ್ ರಂಜನ್'ಗೆ ಕಠಿಣ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ. ರಾಕಿ ಯಾದವ್ ಅವರ ತಂದೆ ಬಿಂದಿ ಯಾದವ್ ಅವರು ಸಾಕ್ಷ್ಯನಾಶ ಮಾಡಿದ್ದಕ್ಕಾಗಿ 5 ವರ್ಷ ಸೆರೆಮನೆವಾಸದ ಶಿಕ್ಷೆ ಪಡೆದಿದ್ದಾರೆ.

ಕಳೆದ ವಾರವಷ್ಟೇ ನ್ಯಾಯಾಲಯವು ರಾಕಿ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ತೇನಿ ಯಾದವ್ ಮತ್ತು ರಾಜೇಶ್ ಕುಮಾರ್ ಎಂಬ ಇನ್ನಿಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ಅವರಿಗೂ ಶಿಕ್ಷೆ ವಿಧಿಸಲಾಗಿದೆ.

ಉಚ್ಚಾಟಿತ ಜೆಡಿಯು ಶಾಸಕಿ ಮನೋರಮಾ ದೇವಿ ಅವರ ಪುತ್ರನಾದ ರಾಕಿ ಯಾದವ್ 2016ರ ಮೇ 7ರಂದು 12ನೇ ತರಗತಿ ವಿದ್ಯಾರ್ಥಿ ಆದಿತ್ಯನನ್ನು ಹತ್ಯೆಗೈದಿರುತ್ತಾರೆ. ಅಂದು 19 ವರ್ಷದ ಕ್ಲಾಸ್ 12 ವಿದ್ಯಾರ್ಥಿ ಆದಿತ್ಯ ಸಚ್'ದೇವ ತನ್ನ ನಾಲ್ವರು ಸ್ನೇಹಿತರೊಂದಿಗೆ ಕಾರಿನಲ್ಲಿ ನೈಟ್ ಔಟ್'ಗೆ ಹೋಗಿರುತ್ತಾರೆ. ರಾಕಿ ಯಾದವ್ ಲ್ಯಾಂಡ್ ರೋವರ್ ಕಾರಿನಲ್ಲಿ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಕಾರು ರಾಕಿ ಯಾದವ್'ನ ಲ್ಯಾಂಡರ್ ರೋವರ್ ಕಾರನ್ನು ಓವರ್'ಟೇಕ್ ಮಾಡಿಕೊಂಡು ಹೋಗಿರುತ್ತದೆ. ಇದರಿಂದ ಕುಪಿತಗೊಂಡ ರಾಕಿ ಯಾದವ್ ಗಾಳಿಯಲ್ಲಿ ಗುಂಡು ಹಾರಿಸಿ ಆ ಹುಡುಗರಿಗೆ ಕಾರು ನಿಲ್ಲಿಸುವಂತೆ ಸೂಚಿಸುತ್ತಾನೆ. ಹೆದರಿದ ಹುಡುಗರು ಕಾರು ನಿಲ್ಲಿಸುತ್ತಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ರಾಕಿ ಯಾದವ್ ಮತ್ತೊಮ್ಮೆ ಕಾರಿನೊಳಗೆ ಗುಂಡು ಹಾರಿಸುತ್ತಾನೆ. ಹಿಂಬದಿಯ ಕಾರಿನೊಳಗೆ ಹೊಕ್ಕ ಗುಂಡು ಆದಿತ್ಯ ಸಚ್'ದೇವನಿಗೆ ತಗಲುತ್ತದೆ. 19 ವರ್ಷದ ಆ ಹುಡುಗ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ.

ಈ ಘಟನೆ ನಡೆದಾಗ ರಾಕಿ ಯಾದವ್'ನ ತಾಯಿ ಮನೋರಮಾ ದೇವಿಯವರು ಜೆಡಿಯು ಪಕ್ಷದ ಎಂಎಲ್ಸಿಯಾಗಿರುತ್ತಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಮನೋರಮಾ ಅವರನ್ನು ಪಕ್ಷದಿಂದ ಅಮಾನತು ಮಾಡುತ್ತದೆ. ಇದೇ ವೇಳೆ, ರಾಕಿ ಯಾದವ್'ನ ತಂದೆ ಬಿಂದಿ ಯಾದವ್ ದೊಡ್ಡ ಉದ್ಯಮಿಯಾಗಿರುತ್ತಾರೆ. ತನ್ನ ಪ್ರಭಾವ ಬಳಸಿ ಪ್ರಕರಣದಲ್ಲಿ ತನ್ನ ಮಗನ ವಿರುದ್ಧದ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಅಪ್ಪ ಬಿಂದಿ ಯಾದವ್ ಪ್ರಯತ್ನಿಸುತ್ತಾನೆ. ಕೋರ್ಟ್'ನಲ್ಲಿ ಇವರು ಈ ಅಕ್ರಮ ಎಸಗಿದ್ದು ಸಾಬೀತಾಗುತ್ತದೆ.

ಇನ್ನು, ಅಪ್ಪ ಮಗನ ಜೊತೆ ಶಿಕ್ಷೆಗೊಳಗಾದ ತೇನಿ ಯಾದವ್ ಪ್ರಮುಖ ಅಪರಾಧಿ ರಾಕಿ ಯಾದವ್'ನ ದೊಡ್ಡಪ್ಪನ ಮಗನಾಗಿದ್ದಾನೆ. ಮತ್ತೊಬ್ಬ ಅಪರಾಧಿ ರಾಕೇಶ್ ಕುಮಾರ್ ಮಾಜಿ ಜೆಡಿಯು ಶಾಸಕಿ ಮನೋರಮಾ ದೇವಿಯ ಸೆಕ್ಯೂರಿಯಾಗಿ ಕೆಲಸ ಮಾಡುತ್ತಿರುತ್ತಾನೆ.