ಮಹಾಘಟಬಂಧನ ತೊರೆದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ಪಾಳೆಯಕ್ಕೆ ಮರಳಿದ್ದರಿಂದ ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ಸಿಗೆ ಮತ್ತೊಂದು ಬಹುದೊಡ್ಡ ಹೊಡೆತ ಬೀಳುವಂತಿದೆ. ಪಕ್ಷದ 27 ಶಾಸಕರ ಪೈಕಿ 14 ಮಂದಿ ಜೆಡಿಯು ಬಾಗಿಲು ಬಡಿಯುತ್ತಿರುವುದರಿಂದ ಬಿಹಾರದಲ್ಲಿ ಕಾಂಗ್ರೆಸ್ ಹೋಳಾಗುವ ಅಪಾಯಕ್ಕೆ ಸಿಲುಕಿದೆ.

ಪಟನಾ/ನವದೆಹಲಿ(ಸೆ.03): ಮಹಾಘಟಬಂಧನ ತೊರೆದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ಪಾಳೆಯಕ್ಕೆ ಮರಳಿದ್ದರಿಂದ ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ಸಿಗೆ ಮತ್ತೊಂದು ಬಹುದೊಡ್ಡ ಹೊಡೆತ ಬೀಳುವಂತಿದೆ. ಪಕ್ಷದ 27 ಶಾಸಕರ ಪೈಕಿ 14 ಮಂದಿ ಜೆಡಿಯು ಬಾಗಿಲು ಬಡಿಯುತ್ತಿರುವುದರಿಂದ ಬಿಹಾರದಲ್ಲಿ ಕಾಂಗ್ರೆಸ್ ಹೋಳಾಗುವ ಅಪಾಯಕ್ಕೆ ಸಿಲುಕಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬಿಹಾರಕ್ಕೆ ರವಾನಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್ ಅವರನ್ನು ದೆಹಲಿಗೆ ಕರೆಸಿಕೊಂಡು, ಪಕ್ಷ ಹೋಳಾಗುವುದನ್ನು ತಪ್ಪಿಸುವಂತೆ ತಾಕೀತು ಮಾಡಿದ್ದಾರೆ.

ಈಗಾಗಲೇ ಒಂದು ಡಜನ್‌'ನಷ್ಟು ಶಾಸಕರು ನಿತೀಶ್ ಹಾಗೂ ಜೆಡಿಯು ನಾಯಕರ ಜತೆ ಸಮಾಲೋಚನೆ ನಡೆಸಿ, ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. 14 ಶಾಸಕರ ಪಾಳೆಯಕ್ಕೆ ಇನ್ನು ನಾಲ್ವರು ಸೇರ್ಪಡೆಯಾದರೆ ಮೂರನೇ ಎರಡರಷ್ಟು ಶಾಸಕರು ಒಗ್ಗೂಡಿದಂತಾಗಲಿದ್ದು, ಅವರು ಜೆಡಿಯುಗೆ ಸೇರ್ಪಡೆಯಾದರೂ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲಿದ್ದಾರೆ.

ಮಹಾಘಟಬಂಧನ ಸರ್ಕಾರದಲ್ಲಿ ಕಾಂಗ್ರೆಸ್ಸಿನ ನಾಲ್ವರು ಸಚಿವರಾಗಿದ್ದರು. ಉಳಿದವರು ನಿಗಮ- ಮಂಡಳಿ ಹುದ್ದೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲಿ ನಿತೀಶ್ ಎನ್‌ಡಿಎ ಪಾಳೆಯಕ್ಕೆ ಜಿಗಿದಿದ್ದರಿಂದ ಅವರ ಕನಸು ಭಗ್ನವಾಗಿದೆ. ಜತೆಗೆ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಯಾದವ ಸಮುದಾಯದ ಲಾಲು ಜತೆ ಕಾಂಗ್ರೆಸ್ ಗುರುತಿಸಿಕೊಂಡರೆ ತಮ್ಮ ಮತದಾರರು ಕೈಬಿಡಬಹುದು. ಅದರ ಬದಲು ಮೃದು ಧೋರಣೆ ಹೊಂದಿರುವ ನಿತೀಶ್ ಜತೆ ಗುರುತಿಸಿಕೊಳ್ಳುವುದು ಒಳ್ಳೆಯದು ಎಂಬ ಭಾವನೆ ಈ ಶಾಸಕರಲ್ಲಿದೆ ಎಂದು ಹೇಳಲಾಗಿದೆ.