ಪುಣೆಯ ಭೀಮಾ ಕೋರೆಗಾಂವ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದಲಿತ ಪ್ರತಿರೋಧದ ಸಂಕೇತ ಪುಣೆಯ ಭೀಮಾ ಕೋರೆಗಾಂವ್ನಲ್ಲಿ ಜಾತಿ ಹಿಂಸಾಚಾರದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ
ನವದೆಹಲಿ: ಪುಣೆಯ ಭೀಮಾ ಕೋರೆಗಾಂವ್ನಲ್ಲಿ ನಡೆದ ಜಾತಿ ಹಿಂಸಾಚಾರ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುಣೆಯ ಭೀಮಾ ಕೋರೆಗಾಂವ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದಲಿತ ಪ್ರತಿರೋಧದ ಸಂಕೇತವಾಗಿದೆಯೆಂದು ಅವರು ಟ್ವೀಟಿಸಿದ್ದಾರೆ.
ದಲಿತರನ್ನು ಭಾರತೀಯ ಸಮಾಜದ ಕೆಳಸ್ತರದಲ್ಲಿಡುವುದೇ ಆರೆಸ್ಸೆಸ್ ಹಾಗೂ ಬಿಜೆಪಿಯ ಮುಖ್ಯ ಉದ್ದೇಶ. ಉನಾ, ರೋಹಿತ್ ವೆಮುಲಾ, ಈಗ ಭೀಮಾ ಕೋರೆಗಾಂವ್ ದಲಿತ ಪ್ರತಿರೋಧದ ಸಂಕೆತವಾಗಿದೆಯೆಂದು ಹೇಳಿದ್ದಾರೆ.
ಪುಣೆಯ ಭೀಮಾ ಕೋರೆಗಾಂವ್ನಲ್ಲಿ ಜಾತಿ ಹಿಂಸಾಚಾರದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳ ಕಲ್ಲುತೂರಾಟದಲ್ಲಿ ಓರ್ವ ಬಲಿಯಾಗಿದ್ದಾನೆ.
ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ್ದ ಸ್ಮರಣಾರ್ಥ ವಿಜಯೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಬಲಪಂಥೀಯ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ತಾರಕಕ್ಕೇರಿ ಕಲ್ಲು ತೂರಾಟ ನಡೆದಿದೆ. ಬೆಂಕಿ ಹಚ್ಚಿ ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಮನೆ, ವಾಹನಗಳನ್ನು ಧ್ವಂಸ ಮಾಡಿದ್ದಾರೆ. 144 ಸೆಕ್ಷನ್ ಜಾರಿಯಿದ್ದರೂ ಇಂದೂ ಕೂಡಾ ಪ್ರತಿಭಟನೆ ಮುಂದುವರೆದಿದೆ.
1 ಜನವರಿ 1818ರಂದು ಭೀಮಾ ಕೋರೆಗಾಂವ್ ನಡೆದ ಕದನವು ಮೇಲ್ಜಾತಿಯವರ ವಿರುದ್ಧ ದಲಿತ-ಶೋಷಿತರ ವಿಜಯವಾಗಿತ್ತು ಎಂದು ದಲಿತ ಮುಖಂಡ ಹಾಗೂ ಚಿಂತಕರು ಅಭಿಪ್ರಾಯಪಡುತ್ತಾರೆ.
