ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಸೆ.2ರಂದು ಕರ್ನಾಟಕದಲ್ಲೂ ಬಂದ್‌ ನಡೆಯಲಿದ್ದು, ಸರ್ಕಾರಿ ಬಸ್‌ ಸಂಚಾರ, ಖಾಸಗಿ ವಾಹನಗಳ ಓಡಾಟ ಇರುವುದಿಲ್ಲ. ವರ್ತಕರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ.
ನವದೆಹಲಿ(ಸೆ.01): ಜುಲೈ ತಿಂಗಳಲ್ಲಿ ನಾಲ್ಕು ದಿನಗಳ ಮುಷ್ಕರ ಹಾಗೂ ಬಂದ್ ಎದುರಿಸಿದ್ದ ಕರ್ನಾಟಕ ಈಗ ಮತ್ತೂಂದು ಬಂದ್ ಎದುರಿಸಲು ಸಜ್ಜಾಗಬೇಕಿದೆ. ಕೇಂದ್ರ ಸರ್ಕಾರದ ರಸ್ತೆ ಸುರಕ್ಷತಾ ಕಾಯ್ದೆಯನ್ನು ವಿರೋಧಿಸಿ, ಜೊತೆಗೆ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್ 2ರಂದು ಕರೆ ನೀಡಿರುವ 'ಭಾರತ್ ಬಂದ್'ಗೆ ರಾಜ್ಯದ ಬಹುತೇಕ ಎಲ್ಲ ಕಾರ್ಮಿಕ, ಕೆಲವು ವಿದ್ಯಾರ್ಥಿ, ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಸೆ.2ರಂದು ಕರ್ನಾಟಕದಲ್ಲೂ ಬಂದ್ ನಡೆಯಲಿದ್ದು, ಸರ್ಕಾರಿ ಬಸ್ ಸಂಚಾರ, ಖಾಸಗಿ ವಾಹನಗಳ ಓಡಾಟ ಇರುವುದಿಲ್ಲ. ವರ್ತಕರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳಲಿರುವುದರಿಂದ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳ ನೌಕರರಿಗೂ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.
ಒಂದು ದಿನದ ಬಂದ್ ಕರೆಗೆ ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳು, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘಟನೆಗಳು, ವಿಮಾ ಕಂಪನಿಗಳ ನೌಕರರ ಸಂಘಟನೆಗಳು, ಲಾರಿ ಮಾಲಿಕರ ಸಂಘ, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕೆಲವು ವಿದ್ಯಾರ್ಥಿ ಸಂಘಟನೆಗಳು, ಹಲವು ಜನಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ ಎಂದು ಸಿಐಟಿಯು ಮುಖಂಡ ಕೆ.ಎನ್. ಉಮೇಶ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಅಗತ್ಯ ಸೇವೆ ಅಬಾಧಿತ:
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಾರಿಗೆ ಸಂಚಾರ, ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಸೇವೆಗಳಿಗೆ ಬಂದ್ನಿಂದ ವಿನಾಯ್ತಿ ನೀಡಲಾಗಿದೆ. ಹಾಗಾಗಿ ಹಾಲು, ತರಕಾರಿ, ಆಸ್ಪತ್ರೆ, ಔಷಧಿ ಅಂಗಡಿ, ಆ್ಯಂಬುಲೆನ್ಸ್ ಸೇವೆಗೆ ಯಾವುದೇ ಅಡಚಣೆ ಆಗುವುದಿಲ್ಲ. ಆದರೆ, ಪೆಟ್ರೋಲ್ ಬಂಕ್, ಅಡುಗೆ ಅನಿಲ ಸರಬರಾಜುದಾರ ಸಂಸ್ಥೆಗಳ ಹಲವು ಸಿಬ್ಬಂದಿಗಳು ಬಂದ್ಗೆ ಬೆಂಬಲ ಸೂಚಿಸಿದ್ದರಿಂದ ಕೆಲವು ಕಡೆ ಪೆಟ್ರೋಲ್ ಬಂಕ್ ಹಾಗೂ ಆಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು ಎಂದು ಬಂದ್ ಸಂಘಟಕರು ಸ್ಪಷ್ಟಪಡಿಸಿದ್ದಾರೆ. ವೇತನ ಏರಿಕೆಗೆ ಆಗ್ರಹಿಸಿ ರಸ್ತೆ ಸಾರಿಗೆ ನೌಕರರು ಜು.25ರಿಂದ 27ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಅದೇ ರೀತಿ ಜು.30ರಂದು ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು.
ರೈಲು , ಸರ್ಕಾರಿ ಬಸ್ ರಸ್ತೆಗಿಳಿಯುವುದಿಲ್ಲ, ಆಟೋ ನಿಲ್ಲಲಿದೆ. ಮೆಟ್ರೊ ಸೇವೆ ಇನ್ನೂ ನಿರ್ಧಾರವಾಗಿಲ್ಲ. ಆಪ್ ಆಧಾರಿತ ಟ್ಯಾಕ್ಸಿ ಸೇರಿದಂತೆ ಎಲ್ಲಾ ಟ್ಯಾಕ್ಸಿಗಳ ಸಂಚಾರ ಇನ್ನೂ ನಿರ್ಧಾರವಾಗಿಲ್ಲ. ಒಟ್ಟಾರೆ ಖಾಸಗಿ ವಾಹನ ಮಾತ್ರ ಸಂಚರಿಸಲಿದ್ದು, ಅದನ್ನು ಅವಲಂಬಿಸುವುದು ಅನಿವಾರ್ಯ. ರಾಜ್ಯ ಸರ್ಕಾರ ಕೂಡ ಇದುವರೆಗೂ ಯಾವುದೇ ಪರ್ಯಾಯ ಮಾರ್ಗದ ವಿವರ ನೀಡಿಲ್ಲ.
ನಾಳೆ ರಾಜ್ಯಾದ್ಯಂತ ಸ್ಕ್ಯಾನಿಂಗ್, ಎಕ್ಸ್ರೇ ಬಂದ್
ಬೆಂಗಳೂರು: ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ರೇಡಿಯೋಲಜಿಸ್ಟ್ಗಳು ದೇಶಾದ್ಯಂತ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು, ಸೆ.1ರಂದು ಜಾಥಾ ನಡೆಯಲಿದೆ. ಮುಷ್ಕರದ ಪರಿಣಾಮ ರಾಜ್ಯದ ಆಸ್ಪತ್ರೆಗಳು ಹಾಗೂ ಡಯಾಗ್ನೋಸ್ಟಿಕ್ ಸೆಂಟರ್ಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್, ಎಕ್ಸ್ರೇ ಸೇರಿದಂತೆ ಅಗತ್ಯ ಸೇವೆಗಳಲ್ಲಿವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಮುಷ್ಕರದ ಅಂಗವಾಗಿ ಬೆಂಗಳೂರಿನಲ್ಲಿ ರೇಡಿಯೋಲಜಿಸ್ಟ್ಗಳು ಸೆ.1ರಂದು ಸ್ವಾತಂತ್ರ್ಯ ಉದ್ಯಾನದಿಂದ ಆನಂದ್ರಾವ್ ಸರ್ಕಲ್ವರೆಗೆ ಜಾಥಾ ನಡೆಸಿ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಇಂಡಿಯನ್ ರೇಡಿಯೋಲಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಷನ್ (ಐಆರ್ಐಎ) ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎನ್.ರವಿ ತಿಳಿಸಿದ್ದಾರೆ. ಮುಷ್ಕರದ ಅಂಗವಾಗಿ ಆ ದಿನ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್, ಎಕ್ಸ್ರೇ ಸೇರಿ ಇತರೆ ಸೇವೆಗಳು ಸ್ಥಗಿತಗೊಳ್ಳಲಿವೆ. ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆಗಳಿಗೆ ಸಿಬ್ಬಂದಿ ಮುಂದಾಗುವುದಿಲ್ಲ ಎಂದಿದ್ದಾರೆ.
