ಕಾಂಗ್ರೆಸ್ ಭಾರತ್ ಬಂದ್ ಕರೆ ವಿಫಲ! ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವ್ಯಂಗ್ಯ! ತೈಲದರ ಏರಿಕೆಗೆ ಕಾರಣ ಏನೆಂದು ಜನತೆಗೆ ಗೊತ್ತು! ಕಾಂಗ್ರೆಸ್ ಗಿಮಿಕ್ ಗೆ ಕಿವಿಗೊಡದ ದೇಶದ ಜನತೆ! ತೈಲದರ ಏರಿಕೆಗೆ ಕಡಿವಣ ಹಾಕಲು ಕೇಂದ್ರ ಬದ್ಧ
ನವದೆಹಲಿ(ಸೆ.10): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ ಬಂದ್ ವಿಫಲಗೊಂಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಅಂತರಾಷ್ಟ್ರೀಯ ವಾಣಿಜ್ಯ ಬಿಕ್ಕಟ್ಟಿನಿಂದ ತೈಲ ಬೆಲೆ ಏರಿಕೆ ಕಂಡಿದ್ದು, ಈ ಸಂಕಷ್ಟ ತಾತ್ಕಾಲವಷ್ಟೇ ಎಂದು ಭರವಸೆ ನೀಡಿದರು. ಇದನ್ನು ದೇಶದ ಜನತೆ ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಗೆ ಇದರ ಅರಿವಿಲ್ಲ ಎಂದು ರವಿಶಂಕರ್ ವ್ಯಂಗ್ಯವಾಡಿದ್ದಾರೆ.
ಭಾರತ ಸರ್ಕಾರದ ನಿಯಂತ್ರಣ ಸಾಮಾನ್ಯ ಭಾರತೀಯನ ಬಳಿಯಿದೆ ಎಂದಿರುವ ರವಿಶಂಕರ್, ಕೇಂದ್ರ ಸರ್ಕಾರ ತಮ್ಮ ಜೊತೆಗೆ ಇದೆ ಎಂಬುದು ಜನತೆಗೆ ಗೊತ್ತಿದೆ ಎಂದು ರವಿಶಂಕರ್ ಅಭಿಪ್ರಾಯಟ್ಟಿದ್ದಾರೆ.
ತೈಲದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಹಾಗೆಂದು ಬೆಲೆ ಏರಿಕೆಯನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಬೆಲೆ ಏರಿಕೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರವಿಶಂಕರ್ ಭರವಸೆ ನೀಡಿದ್ದಾರೆ.
