ಬೆಂಗಳೂರು :  ರಾಜ್ಯ ಸೇರಿದಂತೆ ದೇಶದಲ್ಲಿ ಕ್ಷಯರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡ 40ರಷ್ಟುಮಂದಿಗೆ ಕ್ಷಯ ರೋಗ ಸೋಂಕು ಹರಡುವ ವಾತಾವರಣದಲ್ಲಿದ್ದು, ಇದರಲ್ಲಿ ಶೇ.10 ಮಂದಿಗೆ ಕ್ಷಯರೋಗ ತಗಲುತ್ತಿದೆ.

ಪ್ರತಿ ವರ್ಷ ಕ್ಷಯರೋಗದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕ್ಷಯರೋಗದ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಾ.24ರಂದು ವಿಶ್ವ ಕ್ಷಯರೋಗ ದಿನ. ಪ್ರತಿ ವರ್ಷದಿಂದ ವರ್ಷಕ್ಕೆ ಕ್ಷಯರೋಗ ಉಲ್ಬಣಿಸುತ್ತಿದೆ. 15ರಿಂದ 45 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕ್ಷಯರೋಗ ವರದಿಯಾಗುತ್ತಿದ್ದು, ಕಾಯಿಲೆ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಸೂಕ್ತ ಚಿಕಿತ್ಸೆ ಪಡೆಯದೆ ಬಹಳ ಮಂದಿ ಮೃತಪಡುತ್ತಿದ್ದಾರೆ. ಹೀಗಾಗಿ ಕ್ಷಯ ರೋಗದ ಲಕ್ಷಣಗಳು ಕಂಡ ತಕ್ಷಣ ಆಸ್ಪತ್ರೆಗೆ ಸಂಪರ್ಕಿಸಿ ಕಡ್ಡಾಯವಾಗಿ ಆರು ತಿಂಗಳ ಕಾಲ ಔಷಧ ಪಡೆಯಬೇಕು. ಇಲ್ಲದಿದ್ದರೆ ಶ್ವಾಸಕೋಶಗಳಿಗೆ ವ್ಯಾಪಿಸಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.

ಕ್ಷಯರೋಗಕ್ಕೆ ಕಾರಣವಾಗುವ ವೈರಾಣು ಒಬ್ಬ ರೋಗಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ರೋಗಿಯ ಉಸಿರಾಟದಿಂದ ವಾತಾವರಣದಲ್ಲಿ ಸೇರುವ ವೈರಾಣು ಶೇ.40ರಷ್ಟುಜನಸಂಖ್ಯೆಗೆ ಕ್ಷಯರೋಗದ ಭೀತಿ ತಂದೊಡ್ಡುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಶೇ.10 ರಷ್ಟುಮಂದಿಗೆ ಕ್ಷಯರೋಗ ವ್ಯಾಪಿಸುತ್ತಿದೆ. ಹೀಗಾಗಿ ದೇಶದ ಒಟ್ಟು ಜನಸಂಖ್ಯೆಯ ಶೇ.4ರಷ್ಟುಮಂದಿಗೆ ಕ್ಷಯರೋಗ ಇರುವುದು ದೃಢಪಟ್ಟಿದೆ.

2,500 ವರ್ಷಗಳ ಇತಿಹಾಸ:

ಕ್ಷಯ ರೋಗವು ಕ್ರಿ.ಪೂ. 2500 ವರ್ಷದಿಂದಲೂ ಅಸ್ತಿತ್ವದಲ್ಲಿರುವುದಾಗಿ ತಿಳಿದುಬಂದಿದೆ. ವೇದಗಳಲ್ಲೂ ರೋಗದ ಬಗ್ಗೆ ಪ್ರಸ್ತಾಪವಿದೆ. 1800ರ ಹಿಪೋಕ್ರೆಟ್‌ ಆಧುನಿಕ ವೈದ್ಯ ಪದ್ದತಿಯ ಪಿತಾಮಹ 1882ರಲ್ಲಿ ಡಾ. ರಾಬರ್ಟ್‌ ಕಾಕ್‌ ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ ಕ್ಯೂಲೋಸಿಸ್‌ ರೋಗಾಣುವಿನಿಂದ ಈ ಕಾಯಿಲೆ ಬರುವುದಾಗಿ ಪತ್ತೆ ಹಚ್ಚಿದ್ದರು. ಅಲ್ಲಿಯವರೆಗೆ ಟಿ.ಬಿ. ಕಾಯಿಲೆಗೆ ಕಾರಣ, ಚಿಕಿತ್ಸೆಯೇ ಲಭ್ಯವಿರಲಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರತಿ 1 ಕೋಟಿ ಜನಸಂಖ್ಯೆಯಲ್ಲಿ 27 ಲಕ್ಷ ಜನರಿಗೆ ಕ್ಷಯ ರೋಗ ಇರುತ್ತದೆ. ಭಾರತದಲ್ಲಂತೂ ಪ್ರತಿ ಕೋಟಿ ಜನರಿಗೆ 40 ಲಕ್ಷ ಜನರಿಗೆ ಕ್ಷಯರೋಗದ ಲಕ್ಷಣಗಳಿವೆ.

ಹೀಗಾಗಿ 2025ರ ವೇಳೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಪ್ರತಿಯೊಬ್ಬ ನಾಗರಿಕರೂ ಕ್ಷಯರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಕ್ಷಯ ರೋಗದ ಲಕ್ಷಣ

ಸತತವಾಗಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ತೂಕ ಕಳೆದುಕೊಳ್ಳುವಿಕೆ, ಸುಸ್ತು, ನಿರಾಸಕ್ತಿ ಕಾಣಿಸಿಕೊಂಡರೆ ಕ್ಷಯರೋಗದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು.

*ಚಿಕಿತ್ಸೆ

ಕ್ಷಯರೋಗ ಪ್ರಾಥಮಿಕ ಹಂತದಲ್ಲಿರುವಾಗಲೇ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಆತಂಕ ಪಡದೆ ವೈದ್ಯರು ನೀಡುವ ಔಷಧಗಳನ್ನು 6 ತಿಂಗಳು ಕಡ್ಡಾಯವಾಗಿ ಸೇವಿಸಬೇಕು. ನಿರ್ಲಕ್ಷಿಸಿ ಶ್ವಾಸಕೋಶಕ್ಕೆ ವ್ಯಾಪಿಸಿದರೆ ಚಿಕಿತ್ಸೆ ಕಷ್ಟವಾಗಲಿದೆ.

*ಸಾರ್ವಜನಿಕರ ಪಾತ್ರ

ಕ್ಷಯರೋಗವು ಶ್ವಾಸಕೋಶಕ್ಕೆ ವ್ಯಾಪಿಸಿದರೆ ಸೋಂಕು ಸೋಕಿದವರ ಉಸಿರಾಟದಿಂದ ಬೇರೊಬ್ಬರಿಗೂ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗದ ಲಕ್ಷಣಗಳು ತಮ್ಮ ಅಕ್ಕಪಕ್ಕವರಲ್ಲಿ ಕಾಣಿಸಿದರೆ ಕೂಡಲೇ ಚಿಕಿತ್ಸೆ ಪಡೆಯಲು ಸಲಹೆ ನೀಡಬೇಕು.

ಅಗತ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು. ತಾವೇ ಖುದ್ದಾಗಿ ಅಂತಹ ವ್ಯಕ್ತಿಯನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವುದರಿಂದ ಕ್ಷಯ ರೋಗ ತಡೆಗೆ ಸಹಾಯ ಹಸ್ತ ನೀಡಿದಂತಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

(ಸಾಂದರ್ಬಿಕ ಚಿತ್ರ)