ಅನ್ಯಧರ್ಮೀಯನನ್ನು ಮದುವೆಯಾಗುತ್ತೇನೆ ಎಂದಿದ್ದಕ್ಕೆ ಬಂಧಿಸಿಟ್ಟರುಹಿಂದು ಯುವಕನ ಮದುವೆಯಾದ ಬಳಿಕ ಬಿಡುಗಡೆ ಮಾಡಿದರುಯುವತಿಯಿಂದ ಪೊಲೀಸರಿಗೆ ಇ-ಮೇಲ್ ದೂರು

ಕೊಚ್ಚಿ: ಕ್ರೈಸ್ತ ಯುವಕನನ್ನು ಮದುವೆಯಾಗುವುದನ್ನು ತಪ್ಪಿಸಲು ತನ್ನನ್ನು ಕೇರಳದ ಯೋಗ ಕೇಂದ್ರವೊಂದರಲ್ಲಿ 31 ದಿನಗಳ ಕಾಲ ಕೂಡಿಟ್ಟು, ದೈಹಿಕ ಹಿಂಸೆ ನೀಡಲಾಗಿದೆ ಎಂದು ಬೆಂಗಳೂರಿನ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.

ಎರ್ನಾಕುಲಂನ ಶಿವಶಕ್ತಿ ಯೋಗ ವಿದ್ಯಾ ಕೇಂದ್ರದ ವಿರುದ್ಧ ಈಕೆ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಈ ಸಂಸ್ಥೆ ವಿರುದ್ಧ ಕಳೆದ ತಿಂಗಳು ಇಬ್ಬರು ಮಹಿಳೆಯರು ದೂರು ನೀಡಿ, ತಮ್ಮನ್ನು ಬಲವಂತವಾಗಿ ಕೂಡಿಡಲಾಗಿತ್ತು. ತಮ್ಮಂತೆಯೇ 60 ಮಂದಿಯನ್ನು ಕೇಂದ್ರದಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ ಎಂಬ ಆರೋಪ ಮಾಡಿದ್ದರು ಎಂಬುದು ಗಮನಾರ್ಹ.

ಕ್ರೈಸ್ತ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದೆ. ಮದುವೆಯಾಗಲು ನಿರ್ಧರಿಸಿದ್ದೆ. ಆದರೆ ನನ್ನ ಪೋಷಕರು ಕೇರಳದ ಯೋಗ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಮಾರ್ಚ್‌ನಿಂದ ಮೇವರೆಗೆ ಕೂಡಿಡಲಾಗಿತ್ತು. ಪ್ರೀತಿಸಿದ ಯುವಕನನ್ನು ಹಿಂದು ಧರ್ಮಕ್ಕೆ ಮತಾಂತರಗೊಳಿಸಬೇಕು ಅಥವಾ ಹಿಂದು ಯುವಕನನ್ನೇ ಮದುವೆಯಾಗಬೇಕು. ಹಾಗಾದಲ್ಲಿ ಮಾತ್ರ ಬಿಡುಗಡೆ ಮಾಡುವ ಷರತ್ತು ಇಟ್ಟರು. ತಪ್ಪಿಸಿಕೊಳ್ಳಲು ಮುಂದಾದಾಗ ಹಲ್ಲೆ ನಡೆಸಿದರು. ಕೊನೆಗೆ ಹಿಂದು ಯುವಕನೊಬ್ಬನನ್ನು ಮದುವೆಯಾಗಿದ್ದೇನೆ.

ಆತನಿಗೆ ವಿಚ್ಛೇದನ ನೀಡಿ, ಕ್ರೈಸ್ತ ಯುವಕನನ್ನೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಅ.3ರಂದು ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾಳೆ. ಅಧಿಕಾರಿಗಳು ಪರಾರಿಯಾಗಿದ್ದಾರೆ.