Asianet Suvarna News Asianet Suvarna News

ಸಂಪೂರ್ಣ ಬರಿದಾಗುತ್ತಿದೆ ಬೆಂಗಳೂರು ಅಂತರ್ಜಲ : ಬರಡಾಗುತ್ತಿದೆ ನಗರ!

ಬೆಂಗಳೂರಿನಲ್ಲಿ ಜನಸಂಖ್ಯೆ ಅಧಿಕವಾಗುತ್ತಿದ್ದಂತೆ ದಿನೇ ದಿನೇ ಬರಡಾಗುತ್ತಿದೆ. ನೀರಿಗೆ ತತ್ವಾರ ಎದುರಿಸುವ ದಿನಗಳು ದೂರವಿಲ್ಲ.

Bengaluru Will Face Heavy Water Scarcity In Future
Author
Bengaluru, First Published Apr 27, 2019, 8:24 AM IST

ಬೆಂಗಳೂರು :  ಜಗತ್ತಿನಲ್ಲೇ ಅತಿ ಶೀಘ್ರ ನೀರಿಲ್ಲದಂತಾಗುವ ಮಹಾನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ ಮೊದಲು ಸಂಪೂರ್ಣ ಬರಿದಾಗುವುದು ಅಂತರ್ಜಲ!

ಬೆಂಗಳೂರಿನ ಬಹುತೇಕ ಭೂ ಭಾಗ ಕಾಂಕ್ರೀಟ್‌ ಮತ್ತು ಡಾಂಬರೀಕರಣದಿಂದ ಮುಚ್ಚಿಹೋಗಿರುವುದರಿಂದ ಈಗಾಗಲೇ ಕೆಲ ವರ್ಷಗಳಿಂದ ಅಂತರ್ಜಲಕ್ಕೆ ಒಂದು ಹನಿ ನೀರು ಕೂಡ ಹೋಗುತ್ತಿಲ್ಲ. ಹಾಗಾಗಿ ಪ್ರತೀ ವರ್ಷ ಲಕ್ಷಾಂತರ ದಶಲಕ್ಷ ಲೀಟರ್‌ನಷ್ಟುಅಂತರ್ಜಲವನ್ನು ಹೊರ ತೆಗೆಯಲಾಗುತ್ತಿದೆಯೇ ಹೊರತು ಅದನ್ನು ಮರುಪೂರ್ಣಗೊಳಿಸುವ ವಿಚಾರದಲ್ಲಿ ಗುಲಗಂಜಿಯಷ್ಟುಪ್ರಯತ್ನಗಳಾಗುತ್ತಿಲ್ಲ. ಇದು ಹೀಗೇ ಮುಂದುವರಿದರೆ ಈಗಾಗಲೇ ಹಲವೆಡೆ 1500 ಅಡಿಗಳ ಮಟ್ಟಕ್ಕೆ ಕುಸಿದಿರುವ ಅಂತರ್ಜಲ ಇನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣ ಬರಡಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ತಜ್ಞರು.

ಬೆಂಗಳೂರು ತಾನು ಅವಲಂಭಿಸಿರುವ ಜಲಮೂಲಗಳೆಲ್ಲಾ ಬರಿದಾಗಿಸಿಕೊಂಡು ಅತಿ ವೇಗವಾಗಿ ‘ಶೂನ್ಯ ನೀರಿನ ದಿನ’ (ಡೇ ಜೀರೋ) ದಿನಗಳತ್ತ ಸಾಗುತ್ತಿರುವ ಆಘಾತಕಾರಿ ಅಂಶ ವಿವಿಧ ಸಮೀಕ್ಷೆಗಳಿಂದ ಹೊರಬಿದ್ದಿದೆ. ಇದರ ನಡುವೆ 2020ರ ವೇಳೆಗೆ ಬೆಂಗಳೂರು ಅಂತರ್ಜಲ ಬರಿದಾಗಲಿದೆ ಎಂದು ಕೇಂದ್ರ ಸರ್ಕಾರದ ನೀತಿ ಆಯೋಗ ಕೂಡ ಗಂಭೀರ ಎಚ್ಚರಿಕೆ ನೀಡಿದೆ. ಈ ಸಮೀಕ್ಷೆಗಳನ್ನು ಅಲ್ಲಗಳೆಯದ ತಜ್ಞರು ಹಾಗೂ ಅಧಿಕಾರಿಗಳು, ಅಂತರ್ಜಲ ಮರು ಪೂರಣ ಕಾರ್ಯ ಸಮರ್ಪಕವಾಗಿ ಆಗದೇ ಹೋದರೆ ಬೆಂಗಳೂರಿನ ಜಲಮೂಲಗಳ ಪೈಕಿ ಮೊದಲು ಅಂತರ್ಜಲ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಬರಿದಾಗಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ಅಂತರ್ಜಲ ಮರು ಪೂರಣ ಕಾರ್ಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಸರ್ಕಾರ, ಬಿಬಿಎಂಪಿ, ಜಲಮಂಡಳಿ, ಬಿಡಿಎ ಹಾಗೂ ನಗರದ ಸಾರ್ವಜನಿಕರು ಒಟ್ಟಾಗಿ ಸೇರಿ ಬರಿದಾಗುತ್ತಿರುವ ಭೂಮಿಯ ಜಲಸಂಪತ್ತನ್ನು ವಾಪಸ್‌ ತರುವ ಕೆಲಸ ಮಾಡಬೇಕಿದೆ. ಜೊತೆಗೆ ಕೊಳವೆ ಬಾವಿಗೆ ಅನುಮತಿ ನೀಡುವುದು, ಅಂತರ್ಜಲ ಬಳಕೆ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ. ಇಲ್ಲದಿದ್ದರೆ ಬೆಂಗಳೂರು ಹನಿ ಹನಿ ನೀರಿಗೂ ಚಿಂತಾಜನಕ ಸ್ಥಿತಿ ಅನುಭವಿಸಬೇಕಾದ ಕಾಲ ದೂರವಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಶೇ.80ರಷ್ಟುಭೂಮಿ ಕಾಂಕ್ರೀಟ್‌

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಮೀಕ್ಷೆ ಪ್ರಕಾರ, 2019ರ ಜನವರಿ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ ಶೇ.80ರಷ್ಟುಭೂ ಭಾಗ ಈಗಾಗಲೇ ಕಾಂಕ್ರೀಟ್‌ನಿಂದ ಮುಚ್ಚಿಹೋಗಿದೆ. 2017ರಲ್ಲಿ ಶೇ.76ರಷ್ಟಿದ್ದ ಕಾಂಕ್ರಿಟೀಕರಣ ಪ್ರಮಾಣ, ಈಗ ಶೇ.80 ಮೀರಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇದು ಶೇ.94ರಷ್ಟಾಗಬಹುದೆಂದು ಅಂದಾಜಿಸಲಾಗಿದೆ. ಉದ್ಯಾನ ನಗರಿ ಸಂಪೂರ್ಣ ಕಾಂಕ್ರೀಟ್‌ ನಗರಿಯಾಗುತ್ತಿದೆ. ಇದರಿಂದ ನಗರದಲ್ಲಿ ಪ್ರತೀ ವರ್ಷ ಸರಾಸರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ, ಅಂತರ್ಜಲಕ್ಕೆ ಹನಿ ನೀರೂ ಮರು ಪೂರಣವಾಗುತ್ತಿಲ್ಲ. ಕಾಂಕ್ರೀಟ್‌ ಕಟ್ಟಡ, ಡಾಂಬರ್‌ ಮತ್ತು ಸಿಮೆಂಟ್‌ ರಸ್ತೆಗಳಲ್ಲಿ ಬಿದ್ದ ಬಹುತೇಕ ಮಳೆ ನೀರು ರಾಜಕಾಲುವೆಗಳ ಮೂಲಕ ನಗರದಿಂದ ಹೊರಗೆ ಹರಿದು ಹೋಗುತ್ತಿದೆ.

ನೀರು ಇಂಗಬಹುದಾದ ಶೇ.20ರಷ್ಟುಭೂ ಭಾಗದ ಪೈಕಿ, ಒತ್ತುವರಿ, ಹೂಳು ತುಂಬಿರುವ ನಗರದ ಕೆಲವೇ ಕೆರೆಗಳಲ್ಲಿ ಮತ್ತು ರಾಜಕಾಲುವೆಗಳಲ್ಲಿ ಕೊಳಚೆ ಮಿಶ್ರಿತ ನೀರು ಸಂಗ್ರಹದಿಂದ ನೀರು ಇಂಗುವುದು ತುಂಬಾ ನಿಧಾನ. ಬಿಬಿಎಂಪಿಯ ಇತರೆ ಸಣ್ಣ ಪುಟ್ಟಪಾರ್ಕುಗಳಲ್ಲಿ ನೀರು ನಿಲ್ಲುವುದಿಲ್ಲ, ಹರಿದು ಹೋಗುವುದರಿಂದ ಅಲ್ಲಿ ಸುತ್ತಮುತ್ತಲ ಭೂಮಿಯ ಮೇಲ್ಪದರ ನೆನೆದರೆ ಹೆಚ್ಚು. ಇನ್ನು, ಲಾಲ್‌ಬಾಗ್‌, ಕಬ್ಬನ್‌ಪಾರ್ಕ್, ಐಐಎಸ್ಸಿ, ಬೆಂಗಳೂರು ವಿವಿಯಂತಹ ಕೆಲವೇ ಬೆರಳೆಣಿಕೆಯಷ್ಟುಜಾಗಗಳಲ್ಲಿ ಮಾತ್ರ ನೀರು ಭೂಮಿಗೆ ಇಂಗುತ್ತಿದೆಯಾದರೂ, ಅದನ್ನು ಲೆಕ್ಕಕ್ಕೆ ಪಡೆಯಲೂ ಸಾಧ್ಯವಾಗುವುದಿಲ್ಲ ಎಂದು ಐಐಎಸ್ಸಿ ಪರಿಸರ ವಿಜ್ಞಾನ ಕೇಂದ್ರ ಪ್ರಾಧ್ಯಾಪಕ ಡಾ.ರಾಮಚಂದ್ರ ಅವರು ಹೇಳುತ್ತಾರೆ.

ಹಾಗಾಗಿ ಬೆಂಗಳೂರಿನಲ್ಲಿ ಬಿದ್ದ ಮಳೆ ನೀರೆಲ್ಲಾ ವ್ಯರ್ಥವಾಗಿ ಹೊರಗೆ ಹರಿದು ಹೋಗುತ್ತಿರುವುದರಿಂದ ಹನಿ ನೀರೂ ಅಂತರ್ಜಲಕ್ಕೆ ಮರುಪೂರಣವಾಗುತ್ತಿಲ್ಲ. ಇರುವ ಅಂತರ್ಜಲವನ್ನು ಮಾತ್ರ ಯಾವ ಲಂಗು ಲಗಾಮಿಲ್ಲದೆ ಮನಸೋ ಇಚ್ಛೆಯಾಗಿ ಬಳಸಲಾಗುತ್ತಿದೆ. ಒಂದು ರೀತಿಯಲ್ಲಿ ಅಂತರ್ಜಲದ ದೊಡ್ಡ ಶೋಷಣೆಯೇ ನಗರದಲ್ಲಿ ನಡೆಯುತ್ತಿದೆ.ಪರಿಣಾಮ ಈಗಾಗಲೇ 1500 ಅಡಿಗಳಿಗೂ ಹೆಚ್ಚು ಆಳಕ್ಕೆ ಕುಸಿದಿರುವ ನಗರದ ಅಂತರ್ಜಲ ಮಟ್ಟಕೆಲವೇ ವರ್ಷಗಳಲ್ಲಿ ಸಂಪೂರ್ಣ ಬರಿದಾಗಲಿದೆ ಎನ್ನುತ್ತಾರೆ ತಜ್ಞರು.

ಆರೇಳು ವರ್ಷದಲ್ಲಿ ಕೊಳವೆ ಬಾವಿ ಸಂಖ್ಯೆ ದುಪ್ಪಟ್ಟು!

ಜಲಮಂಡಳಿ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಸಾರ್ವಜನಿಕ ಕೊಳವೆಬಾವಿಗಳು ಸೇರಿದಂತೆ ಒಟ್ಟಾರೆ ಬರೋಬ್ಬರಿ 3.61 ಲಕ್ಷ ಕೊಳವೆ ಬಾವಿಗಳಿವೆ. 2012ರಲ್ಲಿ 1.5 ಲಕ್ಷ ದಷ್ಟಿದ್ದ ಕೊಳವೆಬಾವಿಗಳ ಸಂಖ್ಯೆ ಈಗ ದುಪ್ಪಟ್ಟಿಗೂ ಹೆಚ್ಚಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಈ ಸಂಖ್ಯೆ 4 ಲಕ್ಷ ಮೀರಿದೆ ಎನ್ನಲಾಗುತ್ತಿದೆ.

ಮನೆ ಬಳಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಯಾವುದೇ ನಿಮಾವಳಿಗಳ ಪಾಲನೆ ಆಗುತ್ತಿಲ್ಲ. ಜಲಮಂಡಳಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಿಂದ ನಿಯಮ ಪಾಲಿಸದೆ ಅನುಮತಿ ನೀಡಲಾಗುತ್ತಿದೆ ಎಂಬ ಆರೋಪವಿದೆ. ಒಂದೆಡೆ ಕಾಂಕ್ರೀಟೀಕರಣದಿಂದ ಮಳೆ ನೀರು ಭುವಿನ ಒಡಲು ಸೇರುತ್ತಿಲ್ಲ. ಮತ್ತೊಂದೆಡೆ ಈ ಲಕ್ಷಾಂತರ ಕೊಳವೆ ಬಾವಿಗಳ ಮೂಲಕ ಅಂತರ್ಜಲವನ್ನು ಯಾವುದೇ ಅಡೆ ತಡೆ ಇಲ್ಲದೆ ಹೀರಲಾಗುತ್ತಿದೆ. ಇದರಿಂದ ನಗರದ ಕೇಂದ್ರ ಭಾಗದಲ್ಲೇ ವಿವಿಧೆಡೆ 1200 ಅಡಿ, ಕೆ.ಆರ್‌.ಪುರ ಸೇರಿದಂತೆ ಹೊರವಲಯದ ಕೆಲವೆಡೆ 1400 ಅಡಿ ಕೊರೆದರೂ ನೀರು ಸಿಗದ ಸ್ಥಿತಿ ತಲುಪಿದೆ. ಗಣಿ ಮತ್ತು ಭೂ ವಿಜ್ಞಾನ ಮಾಹಿತಿ ಪ್ರಕಾರವೇ ಕಳೆದ ಒಂದೇ ವರ್ಷದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ನಾಲ್ಕೂ ತಾಲೂಕುಗಳಲ್ಲಿ ಅಂತರ್ಜಲ ಮಟ್ಟಸರಾಸರಿ 9.16 ಅಡಿಗಳಷ್ಟುಕುಸಿತವಾಗಿದೆ. ಪ್ರತೀ ವರ್ಷ ಕೊರೆಯಲಾಗುತ್ತಿರುವ ಬೋರ್ವೆಲ್‌ಗಳಲ್ಲಿ ಶೇ.30ರಷ್ಟುನೀರು ಸಿಗದೆ ವಿಫಲವಾಗುತ್ತಿವೆ ಎನ್ನುತ್ತಾರೆ ಅಂತರ್ಜಲ ಪ್ರಾಧಿಕಾರದ ಅಧಿಕಾರಿಗಳು.

ಐಐಎಸ್ಸಿಯ ಸಮೀಕ್ಷಾ ಮಾಹಿತಿ ಪ್ರಕಾರ, 2001-02ರಲ್ಲಿ ಬೆಂಗಳೂರಿನ ಕೆ.ಆರ್‌.ಪುರ, ವೈಟ್‌ಫೀಲ್ಡ್‌ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ 600ರಿಂದ 700 ಅಡಿಗಳ ಒಳಗೆ ನೀರು ಸಿಗುತ್ತಿತ್ತು. ಆದರೆ, ಈಗ ಅದು 1400ರಿಂದ 1500 ಅಡಿ ದಾಟಿದೆ. ಕೇವಲ ಹದಿನೆಂಟು ಇಪ್ಪತ್ತು ವರ್ಷಗಳಲ್ಲೇ ಇಷ್ಟುದೊಡ್ಡ ಮಟ್ಟದ ಅನಾಹುತವಾದರೆ ಮುಂದಿನ ಪೀಳಿಗೆಯ ಗತಿ ಏನು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು. ಇನ್ನಾದರೂ ಎಚ್ಚೆತ್ತುಕೊಂಡು ನೀರನ್ನು ಮಿತವಾಗಿ ಬಳಸುವ, ಅಂತರ್ಜಲ ಬಳಕೆ ಮೇಲೆ ಕಡಿವಾಣ ಹಾಕುವುದು, ನಗರದಲ್ಲಿ ಪ್ರತಿ ಯೋಜನೆಯಲ್ಲೂ ಅಂತರ್ಜಲ ಮರು ಪೂರಣಕ್ಕೆ ಕ್ರಮ ಕೈಗೊಳ್ಳುವುದು ನಗರದ ಪ್ರತಿಯೊಬ್ಬ ಸಾರ್ವಜನಿಕ ಮತ್ತು ಸರ್ಕಾರ ಹಾಗೂ ಬಿಬಿಎಂಪಿಯ ಬಹುದೊಡ್ಡ ಜವಾಬ್ದಾರಿ ಎಂಬುದು ತಜ್ಞರ ಸಲಹೆಯಾಗಿದೆ.

ಕಾಂಕ್ರಿಟ್‌ ಮಯವಾದ ರಸ್ತೆ, ರಾಜಕಾಲುವೆ

ಕಳೆದ ಒಂದೂವರೆ ವರ್ಷದಲ್ಲಿ ಬೆಂಗಳೂರು ನಗರದ ಕೇಂದ್ರ ಭಾಗದ ಅತಿ ಹೆಚ್ಚು ಸಂಚಾರಿ ದಟ್ಟಣೆ ಎದುರಿಸುತ್ತಿರುವ 29 ರಸ್ತೆಗಳಲ್ಲಿ 92.51 ಕಿ.ಮೀ ಕಾಂಕ್ರಿಟ್‌ ರಸ್ತೆಗಳಾಗಿ ಪರಿವರ್ತನೆ ಮಾಡಲಾಗುತ್ತಿವೆ. ಈಗಾಗಲೇ ಸುಮಾರು 35 ಕಿ.ಮೀ. ಕಾಂಕ್ರೀಟೀಕರಣ ಮಾಡಲಾಗಿದೆ. ಇನ್ನು 23.79 ಕಿ.ಮೀ ಉದ್ದದ 23 ಪ್ರಮುಖ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ರಸ್ತೆಗಳಾಗಿ ಅಭಿವೃದ್ಧಿ, 12 ಹೈ-ಡೆನ್ಸಿಟಿ ಕಾರಿಡಾರ್‌, 13 ಗ್ರೇಡ್‌ ಸಪರೇಟರ್‌, 13 ಅಂಡರ್‌ ಪಾಸ್‌ ಮತ್ತು ಮೇಲ್ಸೇತುವೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಮಳೆ ನೀರು ಹರಿದು ಹೋಗುವ ರಾಜಕಾಲುವೆಗಳನ್ನು ಕಾಂಕ್ರೀಟೀಕರಣ ಮಾಡಲಾಗುತ್ತಿದೆ. ಇದರಿಂದ ನೀರು ಇಂಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತರ್ಜಲ ಮಟ್ಟಕುಸಿತ ಉಂಟಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.

ಕಳೆದ ನಾಲ್ಕೂವರೆ ದಶಕದಲ್ಲಿ ಬೆಂಗಳೂರು ನಗರದಲ್ಲಿ ಶೇ.1028ರಷ್ಟುಕಾಂಕ್ರೀಟಿಕರಣ ಹೆಚ್ಚಾಗಿದೆ. ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಆದರೆ, ಮೊದಲು ಹೆಚ್ಚು ಕಾಲ ಬರುತ್ತಿದ್ದ ಮಳೆ ಕೆಲವೇ ದಿನಗಳಲ್ಲಿ ಬಂದು ನಿಂತುಹೋಗುತ್ತದೆ. ನಗರದ ಶೇ.80ರಷ್ಟುಭೂ ಭಾಗ ಈಗಾಗಲೇ ಕಾಂಕ್ರೀಟಿಕರಣವಾಗಿರುವುದರಿಂದ ಬಿದ್ದ ನೀರೆಲ್ಲಾ ಹೊರಗೆ ಹರಿದು ಹೋಗುತ್ತದೆ. ಜೊತೆಗೆ ಶೇ.88ರಷ್ಟುಗಿಡ ಮರಗಳನ್ನು ಕಳೆದು ಹಾಕಿದ್ದೀವಿ. ಶೇ.79ರಷ್ಟುಕೆರೆ, ಕುಂಟೆಗಳು ನಾಶವಾಗಿವೆ. ಉಳಿದವುಗಳಲ್ಲಿ ಹೂಳು, ಕೊಳಚೆ ನೀರು ತುಂಬಿರುವುದರಿಂದ ಹನಿ ನೀರೂ ಅಂತರ್ಜಲ ಸೇರುತ್ತಿಲ್ಲ. 2 ದಶಕದ ಹಿಂದೆ ಕೆ.ಆರ್‌.ಪುರ ಮತ್ತಿತರೆಡೆ 600 ಅಡಿಗೆ ಸಿಗುತ್ತಿದ್ದ ನೀರು ಈಗ 1500 ಅಡಿ ಕೊರೆದರೂ ಸಿಗುತ್ತಿಲ್ಲ. ಅವೈಜ್ಞಾನಿಕ ನಗರ ನಿರ್ಮಾಣ, ಅಂತರ್ಜಲ ದುರ್ಬಳಕೆ, ನೀರು ಮರುಪೂರಣ ಮಾಡದಿರುವುದು ಅಂತರ್ಜಲ ಕುಸಿತಕ್ಕೆ ಕಾರಣ. ಇನ್ನಾದರೂ ನಾವೆಲ್ಲಾ ಎಚ್ಚೆತ್ತುಕೊಳ್ಳದೆ ಹೋದರೆ ಕೆಲವೇ ವರ್ಷಗಳಲ್ಲಿ ನೀರಿಗಾಗಿ ಬೆಂಗಳೂರಿಗರ ಪರಿಸ್ಥಿತಿ ಚಿಂತಾಜನಕವಾಗುವುದರಲ್ಲಿ ಸಂದೇಹವಿಲ್ಲ. ಸಂವಿಧಾನದ 21 ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ ಶುದ್ಧ ನೀರು ಮತ್ತು ಶುದ್ಧ ಗಾಳಿ ನೀಡುವಂತೆ ಹೇಳಿದೆ. ಅದರಂತೆ ಜನಪ್ರತಿನಿಧಿಗಳು, ಸರ್ಕಾರಗಳು ಕಾರ್ಯನಿರ್ವಹಿಸಬೇಕು. ಇದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕು.

-ಡಾ.ರಾಮಚಂದ್ರ, ಐಐಎಸ್ಸಿ ವಿಜ್ಞಾನಿ

ಬೆಂಗಳೂರಿನಲ್ಲಿ ಅಂತರ್ಜಲ ಮರುಪೂರಣ ಕಾರ್ಯ ಗಂಭೀರವಾಗಿ ಆಗದೆ ಇದ್ದರೆ ಅಂತರ್ಜಲ ಬತ್ತಿ ಹೋಗುತ್ತದೆ ಎಂಬ ತಜ್ಞರ ಹೇಳಿಕೆ ಎಲ್ಲರೂ ಒಪ್ಪುವ ವಿಷಯ. ನಗರದಲ್ಲಿ ಅಂತರ್ಜಲ ಬಹು ಭಾಗಗಳಲ್ಲಿ ಈಗಾಗಲೇ 1200 ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದೆ. ಮಳೆ ನೀರು ಮರುಪೂರ್ಣ ದೃಷ್ಟಿಯಿಂದ ಜಲಮಂಡಳಿಯಿಂದ ನಗರದ 30/40 ಹಾಗೂ ಅದಕ್ಕೆ ಮೇಲ್ಪಟ್ಟಎಲ್ಲ ನಿವೇಶನಗಳಿಗೂ ಮಳೆ ನೀರು ಕೊಯ್ಲು ಪದ್ಧತಿ ಕಡ್ಡಾಯಗೊಳಿಸಲಾಗಿದೆ. ಸುಮಾರು 1.10 ಲಕ್ಷ ಆಸ್ತಿದಾರರು ಇದನ್ನು ಅಳವಡಿಸಿಕೊಂಡಿದ್ದಾರೆ. ಇನ್ನೂ ಸುಮಾರು 80 ಸಾವಿರ ಆಸ್ತಿ ಮಾಲೀಕರು ಅಳವಡಿಸಿಕೊಳ್ಳಬೇಕಿದೆ. ಅವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಆದರೆ, ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿರುವುದು ಕಟ್ಟಡದ ಚಾವಣಿಗೆ ಮಾತ್ರ, ಇದು ಬೆಂಗಳೂರು ಭೂ ಭಾಗದ ಶೇ.10ರಿಂದ 15ರಷ್ಟುಬರಬಹುದು. ಉಳಿದ ಶೇ.90ರಷ್ಟುಭೂಭಾಗ ರಸ್ತೆ, ಮೇಲ್ಸೇತುವೆ, ಕಾಲುವೆ, ಕೆರೆ, ಉದ್ಯಾನವನ ಹೀಗೆ ಬೇರೆ ಬೇರೆಯಿಂದ ಕೂಡಿದೆ. ಆ ಜಾಗದಲ್ಲೂ ನೀರು ಭೂಮಿಗೆ ಇಂತಹದ್ದೇ ಕಾರ್ಯ ಆಗಬೇಕಿದೆ. ಆಗ ಹೆಚ್ಚು ಪ್ರಮಾಣ ನೀರು ಅಂತರ್ಜಲ ಸೇರುತ್ತದೆ. ಬಿಬಿಎಂಪಿ, ಬಿಡಿಎ ಈ ಕೆಲಸ ಮಾಡಬೇಕಾಗುತ್ತದೆ.

-ಕೆಂಪರಾಮಯ್ಯ, ಜಲಮಂಡಳಿ ಮುಖ್ಯ ಎಂಜಿನಿಯರ್‌


ಕುಡಿಯಲೂ ಯೋಗ್ಯವಲ್ಲ; ಆಹಾರವೂ ವಿಷಕಾರಿ ಅಂಶ

ನಗರದ ರಾಜಕಾಲುವೆ ವಿಷಕಾರಿ ಅಂಶ ತುಂಬಿದ ಕೊಳಚೆ ನೀರು ಹರಿಯುತ್ತಿದ್ದು, ಬಹುತೇಕ ಕೆರೆಗಳಲ್ಲಿ ಮಳೆ ನೀರಿನ ಜೊತೆಗೆ ಕೊಳಚೆ ನೀರೂ ಸೇರಿಕೊಂಡಿದೆ. ಇಂತಹ ಕೆರೆಗಳ ಸುತ್ತಮುತ್ತಲಿನ ಪ್ರದೇಶದ ಬಾವಿ, ಕೊಳವೆಬಾವಿಗಳಲ್ಲಿ ದೊರೆಯುವ ನೀರು ಕೂಡ ಸಂಪೂರ್ಣ ಕಲುಷಿತವಾಗಿದೆ. ಹೊರವಲಯದ ಜನರು ಈ ರಾಜಕಾಲುವೆ ನೀರು, ಕೆರೆ ನೀರು, ಕೊಳವೆ ಬಾವಿ ನೀರು ಬಳಸಿ ಬೆಳೆಯುವ ಬೆಳೆಗಳಲ್ಲೂ ವಿಷಕಾರಿ ಅಂಶಗಳು ಕಂಡುಬಂದಿದೆ.

ಐಐಎಸ್ಸಿ ಸಂಸ್ಥೆಯು ಕೆಲ ಶಾಲಾ ಮಕ್ಕಳನ್ನು ಬಳಸಿಕೊಂಡು ನಡೆಸಿದ ಸಮೀಕ್ಷೆಯಲ್ಲಿ ವರ್ತೂರು, ಬೆಳ್ಳಂದೂರು ಸುತ್ತಮುತ್ತಲ ಬಾವಿಗಳಲ್ಲಿ ನೈಟ್ರೇಟ್‌ ಮತ್ತು ಬಾರೀ ಲೋಹದ ಅಂಶ ಕಂಡುಬಂತು. ಅಲ್ಲದೆ, ಈ ನೀರು ಬಳಸಿ ಬೆಳೆದ ತರಕಾರಿ, ಹಣ್ಣು, ಆಹಾರ ಪದಾರ್ಥಗಳನ್ನು ನೈಟ್ರೇಟ್‌, ಲೋಹದಂತಹ ಅಂಶಗಳು ಕಂಡುಬಂದಿದೆ. ಈ ಕಾರಣಕ್ಕಾಗಿಯೇ ಹಿಂದೆ ಪ್ರತಿ ಒಂದು ಲಕ್ಷ ಜನರಲ್ಲಿ ಒಬ್ಬರಲ್ಲಿ ಮಾತ್ರ ಕಂಡುಬರುತ್ತಿದ್ದ ಕಿಡ್ನಿ ವೈಫಲ್ಯ, ಈಗ ಪ್ರತಿ ಐದು ಸಾವಿರ ಜನರಿಗೊಬ್ಬರಂತೆ ಕಂಡುಬರುತ್ತಿದೆ ಎನ್ನುತ್ತಾರೆ ಪ್ರೊ.ರಾಮಚಂದ್ರ.

ನಗರದ ಯಾವ್ಯಾವ ಭಾಗದಲ್ಲಿ ಎಷ್ಟುಅಡಿಗೆ ಅಂತರ್ಜಲ ಕುಸಿತ?

ತಾಲೂಕು    ಆಳ(ಅಡಿಗಳಲ್ಲಿ)

ಬೆಂ. ದಕ್ಷಿಣ    1000-1075

ಬೆಂ. ಪೂರ್ವ    1000-1050

ಬೆಂ.ಉತ್ತರ    1050- 1100

ಆನೇಕಲ್‌    1100-1200

ವರದಿ : ಲಿಂಗರಾಜು ಕೋರಾ

Follow Us:
Download App:
  • android
  • ios