ವಿ.ನಾಗರಾಜ್‌ ಎಂದೇ ಕರೆಯಬೇ ಕೆಂದು 2015 ಜೂನ್‌ನಲ್ಲಿ ಕೋರ್ಟ್‌ ಸೂಚಿಸಿತ್ತು. ಬಳಿಕ ವಿ.ನಾಗರಾಜನ ಅಲಿಯಾಸ್‌ ಹೆಸರನ್ನು ಪೊಲೀಸ್‌ ಇಲಾಖೆಯ ದಾಖಲೆಗಳಿಂದ ತೆಗೆಯಲಾಗಿತ್ತು.

ಬೆಂಗಳೂರು (ಏ.29): ರೌಡಿಶೀಟರ್‌, ಮಾಜಿ ಪಾಲಿಕೆ ಸದಸ್ಯ ವಿ.ನಾಗರಾಜ್‌ನನ್ನು ‘ಬಾಂಬ್‌ ನಾಗ' ಎಂದು ಕರೆಯದಂತೆ ಹೈಕೋರ್ಟ್‌ ಸೂಚಿಸಿದ್ದರೂ, ಪೊಲೀಸರು ಅದೇ ಹೆಸರಿನಲ್ಲಿ ಸಂಬೋಧಿಸುತ್ತಿದ್ದಾರೆ ಎಂದು ನಾಗರಾಜನ ಪರ ವಕೀಲರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರಿಗೆ ಶುಕ್ರವಾರ ನೋಟಿಸ್‌ ನೀಡಿದ್ದಾರೆ.

ನಾನು ಸಾರ್ವಜನಿಕ ಜೀವನದಲ್ಲಿದ್ದು, ಪೊಲೀಸರು ನಾಗ, ‘ಬಾಂಬ್‌ನಾಗ' ಮತ್ತು ‘ಪಾಲ್‌ನಾಗ' ಎಂಬ ಹೆಸರಿನಲ್ಲಿ ಕರೆಯುತ್ತಿ ದ್ದಾರೆ. ಪೊಲೀಸ್‌ ದಾಖಲೆಗಳಲ್ಲೂ ಇದೇ ರೀತಿಯಾದ ಹೆಸರುಗಳಿವೆ. ಇದರಿಂದಾಗಿ ಸಾಮಾಜಿಕ ವಾಗಿ ಧಕ್ಕೆಯಾಗುತ್ತದೆ ಎಂದು ನಾಗರಾಜ್‌ ಹೈಕೋರ್ಟ್‌ ಮೇಟ್ಟಿಲೇರಿದ್ದ. ನಾಗರಾಜ್‌ ಅವರನ್ನು ‘ಬಾಂಬ್‌ನಾಗ', ನಾಗ, ‘ಪಾಲ್‌ ನಾಗ' ಹೆಸರಿನಲ್ಲಿ ಕರೆಯಬಾರದು. ವಿ.ನಾಗರಾಜ್‌ ಎಂದೇ ಕರೆಯಬೇ ಕೆಂದು 2015 ಜೂನ್‌ನಲ್ಲಿ ಕೋರ್ಟ್‌ ಸೂಚಿಸಿತ್ತು. ಬಳಿಕ ವಿ.ನಾಗರಾಜನ ಅಲಿಯಾಸ್‌ ಹೆಸರನ್ನು ಪೊಲೀಸ್‌ ಇಲಾಖೆಯ ದಾಖಲೆಗಳಿಂದ ತೆಗೆಯಲಾಗಿತ್ತು.

ಉದ್ಯಮಿಯೊಬ್ಬರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.14ರಂದು ಹೆಣ್ಣೂರು ಪೊಲೀಸರು ಶ್ರೀರಾಂಪುರದಲ್ಲಿರುವ ನಾಗರಾಜನ ಮನೆ ಮೇಲೆ ದಾಳಿ ನಡೆಸಿದ್ದರು. ಮನೆ ಮೇಲೆ ನಡೆದ ದಾಳಿ, ಪರಿಶೀಲನೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರನ್ನು ಪ್ರತಿಕ್ರಿಯೆ ಕೇಳಿದ್ದರು. ಈ ವೇಳೆ ನಿಂಬಾಳ್ಕರ್‌ ‘ಬಾಂಬ್‌ನಾಗ' ಎಂದು ಹೆಸರು ಸಂಬೋಧಿಸಿದ್ದಾರೆ. ಕೋರ್ಟ್‌ ಸೂಚನೆ ಇದ್ದರೂ ‘ಬಾಂಬ್‌ನಾಗ' ಎಂದು ಕರೆಯುವುದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ. ಮತ್ತೆ ಇದೇ ರೀತಿಯಲ್ಲಿ ಮರುಕಳಿಸಿದರೆ ದೂರು ದಾಖಲಿಸಲಾಗುವುದು ಎಂದು ನಾಗರಾಜನ ಪರ ವಕೀಲ ಶ್ರೀರಾಮರೆಡ್ಡಿ ‘ಕನ್ನಡಪ್ರಭ'ಕ್ಕೆ ಹೇಳಿದರು.
ಈ ಬಗ್ಗೆ ‘ಕನ್ನಡಪ್ರಭ'ದೊಂದಿಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ಸೂದ್‌ ಅವರು, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.