ಬೆಂಗಳೂರು :  ಎಲ್ಲೆಲ್ಲೂ ಮಲ್ಲಿಗೆಯ ಕಂಪು.. ಗೋವಿಂದನ ನಾಮಸ್ಮರಣೆ, ಜಯಘೋಷಗಳೊಂದಿಗೆ ವಿಕಾರಿ ನಾಮ ಸಂವತ್ಸರದ ಚೈತ್ರ ಮಾಸ ಪೌರ್ಣಿಮೆಯ ಐತಿಹಾಸಿಕ ‘ದ್ರೌಪದಿದೇವಿ ಕರಗ ಶಕ್ತ್ಯೋತ್ಸವ’ ಹಾಗೂ ‘ಶ್ರೀ ಧರ್ಮರಾಯಸ್ವಾಮಿ ರಥೋತ್ಸವ’ ಭಕ್ತಿ, ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಬೆಂಗಳೂರು ಕರಗವೆಂದು ಖ್ಯಾತಿ ಪಡೆದಿರುವ ‘ದ್ರೌಪದಿ ದೇವಿಯ ಹೂವಿನ ಕರಕ ಶಕ್ತ್ಯೋತ್ಸವ’ದ ಸುಂದರ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಬಹು ನಿರೀಕ್ಷೆಯ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಸಾಕಷ್ಟುಸಂಖ್ಯೆಯಲ್ಲಿ ಜನರು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ನೆರೆದಿದ್ದರು. ಉತ್ಸವದ ಪ್ರಯುಕ್ತ ದೇವಾಲಯದ ಸುತ್ತಮುತ್ತ ಗ್ರಾಮೀಣ ಜಾತ್ರೆಯ ವೈಭವ ಮೈದಳೆದಿತ್ತು.

ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಬರುವುದನ್ನು ಕಾತುರತೆಯಿಂದ ಕಾಯುತ್ತಿದ್ದ ಜನರು, ಮನಸೂರೆಗೊಳ್ಳುವ ‘ಕರಗ’ ಕಂಡೊಡನೆ ಜಯಘೋಷ ಕೂಗಿದರು. ಈ ವೇಳೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ವೀರಕುಮಾರರು ‘ಗೋವಿಂದಾ... ಗೋವಿಂದಾ...’ ನಾಮಸ್ಮರಣೆ ಮಾಡುತ್ತ ಖಡ್ಗಗಳನ್ನು ಹಿಡಿದು ಕರಗದೊಂದಿಗೆ ಹೆಜ್ಜೆ ಹಾಕಿದರು.

ದೇವಸ್ಥಾನದ ಪ್ರಾಕಾರ ಹಾಗೂ ರಾಜಬೀದಿಗಳಲ್ಲಿ ವಿದ್ಯುತ್‌ ದೀಪಾಲಂಕಾರ, ವೀರಕುಮಾರರ ಅಲಗು ಸೇವೆ, ಶಂಖನಾದ, ಗುಡಿಯ ಗಂಟೆಗಳ ಸದ್ದು.. ಗೋವಿಂದನ ನಾಮಸ್ಮರಣೆ ಸಡಗರಕ್ಕೆ ಇನ್ನಷ್ಟುಇಂಬು ನೀಡಿತ್ತು. ಕರಗ ಸಾಗುವ ವೇಳೆ ಭಕ್ತರು ಮಲ್ಲಿಗೆಯ ಹೂಮಳೆಯ ಸುರಿಸಿ ಭಕ್ತಿಯಲ್ಲಿ ಮಿಂದಿದೆದ್ದರು. ಹುಣ್ಣಿಮೆ ದಿನದ ಮಧ್ಯರಾತ್ರಿ ನಡೆದ ವಿಶ್ವವಿಖ್ಯಾತ ‘ಬೆಂಗಳೂರು ಕರಗ ಉತ್ಸವ’ಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಕರಗ ವೀಕ್ಷಿಸಲು ನಗರದ ತಿಗಳರಪೇಟೆ ಹಾಗೂ ಸುತ್ತಮುತ್ತಲ ನಾನಾ ಭಾಗದ ಜನರು ಸೇರಿದಂತೆ ಮಾಲೂರು, ಹೊಸಕೋಟೆ, ನೆಲಮಂಗಲ, ತುಮ​ಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್‌, ಸೇಲಂ ಮುಂತಾದ ಕಡೆಗಳಿಂದ ತಿಗಳ ಸಮುದಾಯ ಸೇರಿದಂತೆ ವಿವಿಧ ಧರ್ಮೀಯ ಭಕ್ತಸಮೂಹವೇ ಹರಿದುಬಂದಿತ್ತು.

ಕರಗ ಸಾಗಿದ ಮಾರ್ಗಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಸಾವಿರಾರು ಭಕ್ತರ ಗೋವಿಂದಾ ಗೋವಿಂದಾ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ನಸುಕಿನ ತಂಪಿನಲ್ಲಿ ಮಲ್ಲಿಗೆಯ ಕಂಪು ನೆರೆದಿದ್ದ ಸಾವಿರಾರು ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಕರಗ ಶಕ್ತ್ಯೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ಭಕ್ತಿಪರವಶರಾಗಿ ಗೋವಿಂದನನ್ನು ಸ್ಮರಿಸುತ್ತಾ ಕೈ ಮುಗಿದು ಧನ್ಯತೆ ಮೆರೆದರು. ಇದಕ್ಕೂ ಮುನ್ನ ಪ್ರತಿ ವರ್ಷದ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆದವು.

ವಿವಿಧ ಮಾರ್ಗಗಳಲ್ಲಿ ಇಡೀ ರಾತ್ರಿ ಸಂಚರಿಸಿದ ಕರಗಕ್ಕೆ ಅಲ್ಲಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು. ಮುಂಜಾನೆ ವೇಳೆಗೆ ಕರಗ ಹಿಂದಿರುಗಿ ದೇವಾಲಯ ಪ್ರವೇಶಿಸುವುದರೊಂದಿಗೆ ಉತ್ಸವ ಪೂರ್ಣಗೊಂಡಿತು. ದ್ರೌಪದಿ ದೇವಿಯ (ಕರಗಕರ್ತರ) ಈ ನಗರ ಪ್ರದಕ್ಷಿಣೆ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದು ಸೇರಿದ್ದರು. ಸ್ಥಳೀಯರು ತಮ್ಮ ಮನೆ ಮಹಡಿಗಳನ್ನೇರಿ ಕರಗದ ದರ್ಶನ ಪಡೆದರು. ಉದ್ದನೆ ಕತ್ತಿ ಹಿಡಿದ ವೀರಕುಮಾರರು ಆಕರ್ಷಣೆಯ ಕೇಂದ್ರವಾಗಿದ್ದರು.

ಕರಗ- ಪೂಜಾ ಕೈಂಕರ್ಯಗಳು

ಮೂಲ ಶಕ್ತಿ ದೇವತೆಯಾದ ದ್ರೌಪದಿ ದೇವಿಯ ಕರಗ ಉತ್ಸವದಲ್ಲಿ ಚಂದ್ರೋದಯ ಆಗುತ್ತಿದ್ದಂತೆ ದೇವಾಲಯದ ಪೂಜಾರಿ ಕರಗಕರ್ತ ಎನ್‌.ಮನು ಅವರು, ಗೌಡರು, ಗಂಟೆ ಪೂಜಾರಿ, ಉಸ್ತು್ತವಾರಿಯಲ್ಲಿ ನೂರಾರು ವೀರಕುಮಾರರ ಜತೆ ಮಂಗಳವಾದ್ಯಗಳೊಂದಿಗೆ ಮೂಲಸ್ಥಾನ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿ ದೇವತಾರಾಧನೆಯಲ್ಲಿ ನಿರತರಾದರು. ಕರಗಕ್ಕೆ ಹೂವಿನಿಂದ ಸಿಂಗಾರ ಮಾಡಲಾಗಿದ್ದ ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಲಾಯಿತು. ಮಧ್ಯರಾತ್ರಿ ವೇಳೆಗೆ ಹಳದಿ ಸೀರೆ, ಬಳೆ ತೊಟ್ಟು ಸಿಂಗಾರಗೊಂಡಿದ್ದ ಕರಗಕರ್ತ ಧರ್ಮರಾಯಸ್ವಾಮಿಗೆ ವಿಶೇಷ ಪೂಜೆ ನೆರ​ವೇ​ರಿ​ಸಿ‘ಹೂವಿನ ಕರಗ’ ಹೊತ್ತು ಸಾಗಲು ಅಣಿಯಾದರು. ಈ ವೇಳೆ ನೂರಾರು ವೀರಕುಮಾರರು ಕರಗ ರಕ್ಷಣೆಗಾಗಿ ಕೈಯಲ್ಲಿ ಕತ್ತಿ ಹಿಡಿದು ಸಜ್ಜಾಗಿದ್ದರು.

ವಿಜೃಂಭಣೆಯ ಮಹಾರಥೋತ್ಸವ

ಉತ್ಸವದಲ್ಲಿ ಅರ್ಜುನದೇವ ಮತ್ತು ದ್ರೌಪದಿದೇವಿಯ ಉತ್ಸವ ಮೂರ್ತಿಗಳನ್ನು ಮಹಾರಥದಲ್ಲಿಟ್ಟು ಸಿಂಗರಿಸಿ ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮುತ್ಯಾಲಮ್ಮ ದೇವಿಯ ರಥೋತ್ಸವೂ ನಡೆಯಿತು. ಜತೆಗೆ ದೇವಳದ ಗರ್ಭಗುಡಿಯಲ್ಲಿನ ಪರಿವಾರ ದೇವತೆಗಳಾದ ಶ್ರೀಕೃಷ್ಣ , ಕುಂತಿದೇವಿ, ಧರ್ಮರಾಯ, ಭೀಮ, ನಕುಲ, ಸಹದೇವರು, ಅಭಿಮನ್ಯು ಅವರ ಕಂಚಿನ ಉತ್ಸವ ಮೂರ್ತಿಗಳನ್ನು ಕುಲಸ್ಥರು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಪಲ್ಲಕ್ಕಿ ಉತ್ಸವ

ಕರಗ ಶಕ್ತ್ಯೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ 30ಕ್ಕೂ ಹೆಚ್ಚು ರಥಗಳ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಸಾಗಿತು. ಕಲಾಮೇಳ, ವಾದ್ಯಸಂಗೀತ ಉತ್ಸವಕ್ಕೆ ಮೆರಗು ನೀಡಿತ್ತು. ಹೊಳೆಯುವ ಮುತ್ತು ಹಾಗೂ ಕಣ್ಮನ ಸೆಳೆಯುವ ವಿವಿಧ ಹೂಗಳಿಂದ ಅಲಂಕೃತಗೊಂಡ ಪಲ್ಲಕ್ಕಿಗಳು ನಗರ್ತಪೇಟೆ, ದೊಡ್ಡಪೇಟೆಗಳ ಮೂಲಕ ಪ್ರಾತಃಕಾಲದ ವೇಳೆಗೆ ಕೆ.ಆರ್‌. ಮಾರುಕಟ್ಟೆಚೌಕ ತಲುಪಿದವು. ಕರಗವನ್ನು ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ದೇವಸ್ಥಾನದ ಬಳಿ ಜಮಾಯಿಸಿದ್ದರು. ಇದೇ ವೇಳೆ ಪಲ್ಲಕಿ ಉತ್ಸವವೂ ಸಾಗಿ ಭಕ್ತರಿಗೆ ದರ್ಶನ ನೀಡಿದವು. ಭಕ್ತರ ದಣಿವು ತಣಿಸಲು ಅಲ್ಲಲ್ಲಿ ಅರವಟಿಗಳನ್ನು ತೆರೆದು ಮಜ್ಜಿಗೆ, ಪಾನಕ, ರಸಾಯನ ಮತ್ತು ಕೋಸಂಬರಿ ವಿತರಿಸಲಾಯಿತು.

ಭಾವೈಕ್ಯದ ಸಂಕೇತ ‘ಕರಗ’

ಕಲ್ಯಾಣಪುರಿ ನಾಮಧೇಯದಿಂದ ಪ್ರಖ್ಯಾತವಾಗಿರುವ ನಗರದ ತಿಗಳರಪೇಟೆಯ ‘ಬೆಂಗಳೂರು ಕರಗ’ ಉತ್ಸವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಉತ್ಸವದಂದು ಕರಗಕರ್ತರು ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್‌ ಸಾಹೇಬರ ದರ್ಗಾಕ್ಕೆ ಪದ್ಧತಿಯಂತೆ ಪೂಜೆ ಸಲ್ಲಿಸಿದರು. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾದ ಕರಗ ಉತ್ಸವ ಭಾವೈಕ್ಯತೆಗೆ ಕನ್ನಡಿ ಹಿಡಿದಿತ್ತು. ಯಾವುದೇ ಭೇದ ಭಾವವಿಲ್ಲದೆ ಹಿಂದೂ ಮುಸ್ಲಿಂ ಜನಾಂಗದವರು ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

‘ಕರಗ’ ಸಾಗಿದ ಹಾದಿ...

ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್‌ ಪೇಟೆಯ ಶ್ರೀರಾಮಸೇವಾ ಮಂದಿರ, 15ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಾಯಿತು. ನಂತರ ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್‌ ಪೇಟೆ ರಸ್ತೆ, ಮಸ್ತಾನ್‌ ಸಾಬ… ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಿತ್ತು. ಕಾಟನ್‌ ಪೇಟೆ ಪೊಲೀಸ್‌ ರಸ್ತೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಕ್ಕಿಪೇಟೆ ಮಾರ್ಗವಾಗಿ ಕರಗ ಸಾಗಿತು. ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್‌ ಬಂದೋಬÓ್ತ… ಏರ್ಪಡಿಸಲಾಗಿತ್ತು.

ಹೂ ಅಲಂಕೃತ ಕರಗ

ಹಿತ್ತಾಳೆಯ ಕೊಡವನ್ನು ಹೂಗಳಿಂದ ಸುಂದರವಾಗಿ ಕಿರೀಟದಂತೆ ಅಲಂಕರಿಸಿ, ತಲೆಯ ಮೇಲಿಟ್ಟುಕೊಂಡು ಕೈಬಿಟ್ಟು ಖಡ್ಗ ಹಿಡಿದು, ಹಸ್ತಮುದ್ರೆ, ಮುಖಮುದ್ರೆಗಳಿಂದ ಮಾಡುವ ನೃತ್ಯವೇ ಕರಗ. ಸಂಪೂರ್ಣ ಮಲ್ಲಿಗೆ ದಂಡೆ, ಅಲ್ಲಲ್ಲಿ ಕನಕಾಂಬರದ ಅಲಂಕಾರಿಕ ಎಸಳುಗಳು, ಚುನ್ನೆರಿಯ ನಕ್ಷತ್ರಗಳು, ಪುಟ್ಟಬಣ್ಣದ ಪತಾಕೆಗಳು. ಶಿಖರದಲ್ಲಿ ಪುಟ್ಟಬ್ಯಾಟರಿ ಆಧಾರಿತ ಒಂಟಿದೀಪ. ದಂಡೆಯಲ್ಲಿ ಕಿರುನಗೆ ಸೂಸುವ ಗುಲಾಬಿದಳಗಳಿಂದ ಅಲಂಕೃತ ಹೂವಿನ ಕರಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಜಾನೆ ವೇಳೆಗೆ ದೇವಾಲಯಕ್ಕೆ ವಾಪಸಾಗುತ್ತದೆ. ಧ್ವಜಾವರೋಹಣದ ದಿನ ಕರಗವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಕರ್ಪೂರ ಸೇವೆ

ಧ್ವಜಾರೋಹಣ ನಡೆದ 9ನೇ ದಿನಕ್ಕೆ ನಡೆಯುವುದೇ ಹೂವಿನ ಕರಗ ಶಕ್ತ್ಯೋತ್ಸವ. ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ವಹ್ನಿ ಕುಲದ ಮಹಿಳೆಯರು ದೇವಿಗೆ ಪೊಂಗಲ್‌ ಸೇವೆ ನೆರವೇರಿಸಿದರು. ಹೂವಿನ ಕರಗ ಹಿನ್ನೆಲೆ ಅರ್ಚಕರು, ವೀರಕುಮಾರರು ಶುಕ್ರವಾರ ಮುಂಜಾನೆ ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನಕ್ಕೆ ಆಗಮಿಸಿ ವಿಧಿವಿಧಾನಗಳನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ದೇವಾಲಯದ ಮುಂಭಾಗ ಭಕ್ತರು ದ್ರೌಪದಿದೇವಿಗಾಗಿ ರಾಶಿಗಟ್ಟಲೆ ಕರ್ಪೂರ ಉರಿಸಿದರು. ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ ಬಳೆತೊಡಿಸುವ ಶಾಸ್ತ್ರ ನೆರವೇರಿತು. ನಂತರ ಅರ್ಜುನ ಮತ್ತು ದ್ರೌಪದಿ ದೇವಿಗೆ ವಿವಾಹ ಶಾಸ್ತ್ರ ಮಾಡಲಾಯಿತು. ಸಂಜೆ ಶಾಂತಿ, ಗಣ ಹೋಮ ಪೂರ್ಣಗೊಳಿಸಲಾಯಿತು.

ಏ.21ಕ್ಕೆ ವಸಂತೋತ್ಸವ

ನಾಳೆ (ಏ.20) ರಾತ್ರಿ 2 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಶಕ್ತಿಸ್ಥಳ ಏಳು ಸುತ್ತಿನ ಕೋಟೆ ಪುರಾಣ ಪ್ರವಚನ ನಡೆದು, ಮುಂಜಾನೆ 4 ಗಂಟೆಗೆ ಗಾವು ಶಾಂತಿ ನೆರವೇರಲಿದೆ. ಭಾನುವಾರ ಸಂಜೆ 4 ಗಂಟೆಗೆ ವಸಂತೋತ್ಸವ ಆಚರಿಸಿ ರಾತ್ರಿ 12 ಗಂಟೆಗೆ ಧ್ವಜಾವರೋಹಣ ಮೂಲಕ 11 ದಿನಗಳ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.