ಬೆಂಗಳೂರು :  ಕೆರೆ, ರಾಜಕಾಲುವೆ ಒತ್ತುವರಿ ಮಾಡದೇ ಮನೆ ಕಟ್ಟಿಕೊಂಡಿದ್ದಿರಾ ಹಾಗಾದರೆ ನಿಮ್ಮ ಮನೆ ಸೇಫ್. ಆದರೆ, ನಿಮ್ಮ ಮನೆ ಕೆರೆ, ರಾಜಕಾಲುವೆ, ಬಫರ್ ಜೋನ್‌ಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದರೆ ಮಾತ್ರ ಸಮಸ್ಯೆ ಗ್ಯಾರಂಟಿ! ಏಕೆಂದರೆ, ಸೆಪ್ಟಂಬರ್ ಮಾಸದಲ್ಲಿ ಬೆಂಗಳೂರು ವಾಡಿಕೆಗಿಂತ ತುಸು ಹೆಚ್ಚು ಮಳೆ ಕಾಣಲಿದೆ. 

ಹಾಗಂತ, ಕೇರಳ, ಕೊಡಗಿನಲ್ಲಿ ನಿರ್ಮಾಣವಾಗಿರುವ ಪ್ರಳಯದಂತಹ ನೆರೆ ಖಂಡಿತ ಬರುವುದಿಲ್ಲ. ಇಂತಹ ಗಾಬರಿ ಹುಟ್ಟಿಸುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಖುದ್ದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಒತ್ತುವರಿ ಮಾಡಿಕೊಂಡು ತಗ್ಗುಪ್ರದೇಶದ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡವರು  ಸೆಪ್ಟಂಬರ್‌ನಲ್ಲಿ ಸಂಕಷ್ಟಕ್ಕೆ ಸಿಲುಕುವುದು ಮಾತ್ರ ಅಷ್ಟೇ ನಿಜ.

ಸಾಮಾನ್ಯವಾಗಿ ಬೆಂಗಳೂರು ನಗರ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಕಾಣುತ್ತದೆ. ಸೆಪ್ಟಂಬರ್‌ನಲ್ಲಿ ವಾಡಿಕೆ ಮಳೆ ಪ್ರಮಾಣ 174 ಮಿ. ಮೀ. ಇರುತ್ತದೆ. ಈ ಬಾರಿಯ ಸೆಪ್ಟಂಬರ್ ವಾಡಿಕೆಗಿಂತ ತುಸು ಹೆಚ್ಚು ಮಳೆ ಕಾಣಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

 ಬೆಂಗಳೂರಿನ ಸ್ಥಿತಿ ಹೇಗಿದೆಯೆಂದರೆ, ಸೆಪ್ಟಂಬರ್ ನ ವಾಡಿಕೆ ಮಳೆಯೇ ನಗರದ ಹಲವು ಪ್ರದೇಶಗಳನ್ನು ಜಲಾವೃತ ಮಾಡುತ್ತದೆ. ಅಷ್ಟೊಂದು ಅವೈಜ್ಞಾನಿಕವಾಗಿ ಈನಗರದಲ್ಲಿ ಬಡಾವಣೆಗಳ ನಿರ್ಮಾಣವಾಗಿದೆ. ಇನ್ನು ವಾಡಿಕೆಗಿಂತ ಹೆಚ್ಚು ಮಳೆಯಾದರಂತೂ ಹಲವು ಪ್ರವೇಶಗಳು ಜಲಾವೃತಗೊಳ್ಳುವುದು ಖಚಿತ. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ. 

174 ಪ್ರದೇಶ ಜಲಾವೃತ: ಕೆಎಸ್‌ಎನ್‌ಡಿಎಂಸಿ 2016-17 ರಲ್ಲಿ ಮಳೆ ಹಾನಿ ಪ್ರದೇಶಗಳ ಕುರಿತಂತೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ ಕೇವಲ 40 ಮಿ.ಮೀ ಮಳೆ ಸುರಿದರೂ ಅದನ್ನು ಭರಿಸಲು ನಗರಕ್ಕೆ ಸಾಧ್ಯವಿಲ್ಲ. ಈ ಪ್ರಮಾಣದ ಮಳೆಗೆ ನಗರದ ಎಂಟು ವಲಯದ 174 ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. 40 ಮಿ.ಮೀ. ಮಳೆಗೆ ಈ ಪ್ರದೇಶಗಳಲ್ಲಿ ನೀರು ನುಗ್ಗುವ ಪರಿಸ್ಥಿತಿಯಿರುವಾಗ ಸೆಪ್ಟಂಬರ್ ನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಅಂದರೆ 174 ಮಿ.ಮೀಗಿಂತ ಹೆಚ್ಚು ಮಳೆಯಾದರೇ ಈ ಪ್ರದೇಶಗಳ ಪರಿಸ್ಥಿತಿ ಊಹೆಗೆ ಮೀರಿದ್ದು ಎಂದು ತಜ್ಞರು ಹೇಳುತ್ತಾರೆ.

ವಿಶ್ವನಾಥ ಮಲೇಬೆನ್ನೂರು