Asianet Suvarna News Asianet Suvarna News

ಬೆಂಗಳೂರಿಗೆ ಹೊಚ್ಚ ಹೊಸ ಲಾಂಛನ

ನ್ಯೂಯಾರ್ಕ್, ಲಂಡನ್, ಮೆಲ್ಬರ್ನ್ ನಗರಗಳ ಮಾದರಿಯಲ್ಲಿ ಉದ್ಯಾನ ನಗರಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ‘ಬೆಂಗಳೂರು’ ಲಾಂಛನವನ್ನು ಬಿಡುಗಡೆ ಮಾಡಿದೆ.

Bengaluru Now Has A Logo Of Its Own

ಬೆಂಗಳೂರು (ಡಿ.25): ನ್ಯೂಯಾರ್ಕ್, ಲಂಡನ್, ಮೆಲ್ಬರ್ನ್ ನಗರಗಳ ಮಾದರಿಯಲ್ಲಿ ಉದ್ಯಾನ ನಗರಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ‘ಬೆಂಗಳೂರು’ ಲಾಂಛನವನ್ನು ಬಿಡುಗಡೆ ಮಾಡಿದೆ.

ಭಾನುವಾರ ವಿಧಾನಸೌಧದ ಪೂರ್ವ ದ್ವಾರದ ಮುಂಭಾಗದ ಮೆಟ್ಟಿಲುಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಹಬ್ಬ’ದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಲಾಂಛನ ಲೋಕಾರ್ಪಣೆಗೊಳಿಸಿದರು.

ಈ ಅಪರೂಪದ ಕ್ಷಣಕ್ಕೆ ನಗರದ ಸಾವಿರಾರು ನಾಗರಿಕರು ಸಾಕ್ಷಿಯಾದರು. ಈ ವೇಳೆ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಸಂಭ್ರಮಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ನಾಗರಿಕರು ‘ವಾವ್ಹ್’ ಎಂಬ ಉದ್ಗಾರವನ್ನು ಒಮ್ಮೆಲೇ ತೆಗೆದು ಸಂತಸ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಲಾಂಛನ ಬಿಡುಗಡೆ ಮಾಡಲಾಗಿದೆ.

ಇದು ಕೇವಲ ಲಾಂಛನವಲ್ಲ. ಬೆಂಗಳೂರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಪರಿಸರ, ಪರಂಪರೆ, ಇತಿಹಾಸವನ್ನು ಇದು ಸಾರಲಿದೆ. ಲಾಂಛನವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಎಲ್ಲರೂ ಲಾಂಛನ ಬಳಸಬಹುದು: ಲಾಂಛನವನ್ನು ಸದ್ಯ ಪ್ರವಾಸೋದ್ಯಮ ವಿಸ್ತರಣೆ, ಬೆಂಗಳೂರು ಅಸ್ಮಿತೆ ಉಳಿವಿಗಾಗಿ ಹಾಗೂ ಬಂಡವಾಳ ಹೂಡಿಕೆಗೆ ಬಳಕೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು. ಕೇವಲ ಸರ್ಕಾರ ಮಾತ್ರವಲ್ಲದೆ, ಈ ಲಾಂಛನವನ್ನು ಬೆಂಗಳೂರಿಗರು ತಮ್ಮ ಅಸ್ಮಿತೆಯಾಗಿ ಬಳಸಿಕೊಳ್ಳಲು ಅವಕಾಶವಿದೆ. ಸಾರ್ವಜನಿಕರು ತಾವು ಬೆಂಗಳೂರಿಗರು ಎಂದು ತಿಳಿಸಲು ಈ ಲಾಂಛನವನ್ನು ಮುಕ್ತವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬೆಂಗಳೂರು ಬ್ರ್ಯಾಂಡ್ ಮೂಲಕ ಪ್ರವಾಸೋದ್ಯಮ ವಿಸ್ತರಣೆಗೆ ಅನುಕೂಲವಾಗಲಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಮತ್ತಷ್ಟು ಪರಿಚಯಿಸಲು ಕೂಡ ಸಹಾಯವಾಗಲಿದೆ ಎಂದು ಹೇಳಿದರು. ನಗರದಲ್ಲಿ ಉಚಿತ ವೈಫೈ ನೀಡಲು ಆರು ಸಾವಿರ ಜಾಗಗಳನ್ನು ಗುರುತಿಸಲಾಗಿದ್ದು, ಬರುವ ಜ.15ಕ್ಕೆ 300 ಜಾಗಗಳಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರೀಸ್, ಮೇಯರ್ ಸಂಪತ್‌ರಾಜ್, ಇಲಾಖೆ ನಿರ್ದೇಶಕಿ ಡಾ. ಎನ್. ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios