Asianet Suvarna News Asianet Suvarna News

10 ನಿಮಿಷ ಕಾಲ ಮೆಟ್ರೋ ರೈಲು ಸ್ಥಗಿತ

ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿತ್ತು.  ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ-ನಾಯಂಡಹಳ್ಳಿ) ಮೆಟ್ರೋ ರೈಲು ಸಂಚಾರ 10 ನಿಮಿಷ ಸ್ಥಗಿತಗೊಂಡಿತು

Bengaluru Metros Purple Line hit by temporary technical glitch
Author
Bengaluru, First Published Dec 25, 2018, 9:20 AM IST

ಬೆಂಗಳೂರು :  ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸುಮಾರು 10 ನಿಮಿಷಕ್ಕೂ ಅಧಿಕ ಕಾಲ ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ-ನಾಯಂಡಹಳ್ಳಿ) ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತು. ಪೀಕ್‌ ಅವರ್‌ನಲ್ಲಿ ಮೆಟ್ರೋ ರೈಲು ಕೈಕೊಟ್ಟಿದ್ದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಯಿತು.

ಬೆಳಗ್ಗೆ 9.45ರ ಸುಮಾರಿಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಸಿಗ್ನಲಿಂಗ್‌ ಸಿಸ್ಟ್‌ಂನಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿತು. ಇದರಿಂದ ಇಂದಿರಾನಗರದಿಂದ ಸ್ವಾಮಿ ವಿವೇಕಾನಂದ ಹಾಗೂ ಬೈಯಪ್ಪನಹಳ್ಳಿಗೆ ತೆರಳಬೇಕಿದ್ದ ಹಾಗೂ ಆ ನಿಲ್ದಾಣಗಳಿಂದ ಮೆಜೆಸ್ಟಿಕ್‌ ಕಡೆಗೆ ಬರಬೇಕಿದ್ದ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು. 10 ನಿಮಿಷಗಳ ಬಳಿಕ ತಾಂತ್ರಿಕ ದೋಷ ಸರಿಪಡಿಸಿ, ರೈಲು ಸಂಚಾರ ಮರು ಆರಂಭಿಸಲಾಯಿತು. ಅಷ್ಟರಲ್ಲಿ ಎಂ.ಜಿ.ರಸ್ತೆ. ಟ್ರಿನಿಟಿ, ಹಲಸೂರು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಯಿತು.

ರೈಲು ಸಂಚಾರ ಮರು ಆರಂಭವಾದರೂ ವೇಗ ತಗ್ಗಿಸಲಾಯಿತು. ಇದರಿಂದ ಕಚೇರಿಗೆ ಹೋಗುವ ಉದ್ಯೋಗಿಗಳಿಗೆ ಸಮಸ್ಯೆಯಾಯಿತು. ಪೀಕ್‌ ಅವರ್‌ನಲ್ಲಿ 4ರಿಂದ 6 ನಿಮಿಷಕ್ಕೊಂದು ರೈಲು ಕಾರ್ಯಚರಣೆ ಮಾಡಲಾಗುತ್ತದೆ. ಒಮ್ಮೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ್ದರಿಂದ ಕೆಲವರು ಎರಡು, ಮೂರನೇ ರೈಲಿಗೆ ಕಾದು ಪ್ರಯಾಣಿಸಿದರು. ಬೈಯಪ್ಪನಹಳ್ಳಿ ಕಡೆಯಿಂದ ಬರುವ ರೈಲುಗಳ ವೇಗ ತಗ್ಗಿಸಿದ್ದರಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ಭಾರಿ ಸಂಖ್ಯೆಯ ಪ್ರಯಾಣಿಕರು ಜಮಾಯಿಸಿದ್ದರು. ಬೆಳಗ್ಗೆ 11ರ ವೇಳೆಗೆ ರೈಲು ಸಂಚಾರ ಎಂದಿನ ಲಯಕ್ಕೆ ಮರಳಿತು. ತಾಂತ್ರಿಕದೋಷದಿಂದ ಬೈಯಪ್ಪನಹಳ್ಳಿ- ನಾಯಂಡಹಳ್ಳಿ ಮಾರ್ಗದಲ್ಲಿ ಆರು ಟ್ರಿಪ್‌ ಕಡಿತಗೊಳಿಸಲಾಯಿತು.

Follow Us:
Download App:
  • android
  • ios