ಬೆಂಗಳೂರಿನಲ್ಲೂ ಬೆಚ್ಚಿ ಬೀಳಿಸುವ ಬುರಾರಿ ಕುಟುಂಬದ ರೀತಿ ಘಟನೆ
ಬೆಂಗಳೂರಲ್ಲೂ ದಿಲ್ಲಿಯ ‘ಬುರಾರಿ ಮಾದರಿ’ಯ ಸಾವುಗಳು ಸಂಭವಿಸಿವೆ. ದಿಲ್ಲಿಯ ಪ್ರಕರಣದಂತೆ ಇಲ್ಲಿಯೂ ಕೂಡ ಮೂವರು ಕುಟುಂಬ ಸದಸ್ಯರು ಒಂದೇ ಬಾರಿ ಸಾವನ್ನಪ್ಪಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲೂ ದಿಲ್ಲಿಯ ‘ಬುರಾರಿ ಮಾದರಿ’ಯ ಸಾವುಗಳು ಸಂಭವಿಸಿವೆ. ದೇವರೇ ನಮ್ಮನ್ನು ಕಾಪಾಡುತ್ತಾನೆ ಎಂದು ದಿಲ್ಲಿಯ ಬುರಾರಿಯಲ್ಲಿ ಇಡೀ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿತ್ತು. ಈಗ ಅದೇ ರೀತಿ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು, ‘ದೇವರು ನನ್ನನ್ನು ಕಾಪಾಡುತ್ತಾನೆ’ ಎಂದು ಚಿಕಿತ್ಸೆ ಪಡೆಯದೆ ಅಸುನೀಗಿದ್ದಾರೆ. ಪತಿಯ ಸಾವಿನಿಂದ ನೊಂದು ಪತ್ನಿ ಹಾಗೂ ಮೃತರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಶವಂತಪುರ ಮುತ್ತ್ಯಾಲನಗರದ 18ನೇ ಕ್ರಾಸ್ ನ ಶೇಷಪಾಣಿ (44) ಹಾಗೂ ಇವರ ಪತ್ನಿ ಉಷಾ ನಂದಿನಿ, ಶೇಷಪಾಣಿ ತಾಯಿ ಲಕ್ಷ್ಮೀದೇವಿ (65) ಮೃತರು. 5 ದಿನಗಳ ಹಿಂದೆ ಮೂವರು ಮೃತಪಟ್ಟಿದ್ದು, ಮನೆಯಿಂದ ಬರುತ್ತಿದ್ದ ದುರ್ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಚೇತನ್‌ಸಿಂಗ್ ರಾಥೋಡ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಈ ಕುಟುಂಬ ನೆರೆ ಮನೆ ನಿವಾಸಿಗಳ ಬಳಿ ‘ನಮ್ಮ ಮೇಲೆ ದೇವರು ಬರುತ್ತಾನೆ’ ಎಂದು ಹೇಳಿಕೊಂಡಿತ್ತು. ಶೇಷಪಾಣಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಶೇಷಪಾಣಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು, ‘ದೇವರೇ ಕಾಪಾಡು ತ್ತಾನೆ’ ಎಂದು ನಂಬಿದ್ದರು. ಅಸ್ವಸ್ಥರಾಗಿದ್ದ ಶೇಷಪಾಣಿ 5 ದಿನದ ಹಿಂದೆ ಮೃತಪಟ್ಟರು. ಪತಿ ಮೃತಪಟ್ಟಿದ್ದರಿಂದ ನೊಂದ ಪತ್ನಿ ಉಷಾ ದಿಕ್ಕು ತೋಚದಂತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಷಾ ಜತೆ ಶೇಷಪಾಣಿ ಅವರ ತಾಯಿ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದ ರಿಂದ ಅನುಮಾನಗೊಂಡ ಕಟ್ಟಡದ ಮಾಲೀಕ ನಿತಿನ್ ರಾತ್ರಿ 7.30 ರ ಸುಮಾರಿಗೆ ಮನೆಯ ಬಾಗಿಲು ತಟ್ಟಿ ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ನಿತಿನ್ ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆಂಧ್ರಪ್ರದೇಶದಲ್ಲಿರುವ ಇವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಶೇಷಪಾಣಿ ಅವರ ಮೃತದೇಹ ಹಾಗೂ ಅವರ ತಾಯಿ ಮೃತ ದೇಹ ನೆಲದ ಮೇಲೆ ಬಿದ್ದಿದ್ದವು. ಲಕ್ಷ್ಮೀದೇವಿ ಅವರ ಕಣ್ಣು, ಬಾಯಲ್ಲಿ ರಕ್ತ ಬಂದಿತ್ತು, ಉಷಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 5 ದಿನಗಳ ಹಿಂದೆ ಮೂವರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಲಕ್ಷ್ಮೀದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಉಷಾ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದು ತಿಳಿಯಲಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.