ಬೆಂಗಳೂರು ಡ್ರಗ್ ಮಾಫಿಯಾ ಬಯಲಾಯ್ತು ಸ್ಫೋಟಕ ಸತ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 9:11 AM IST
Bengaluru Drug Mafia targeting Rich Peoples
Highlights

ಬೆಂಗಳೂರು ಡ್ರಗ್ ಮಾಫಿಯಾ ಬಗ್ಗೆ ಇದೀಗ ಸ್ಫೋಟಕ ಸತ್ಯವೊಂದು ಬಯಲಾಗಿದೆ. ಅದರಲ್ಲಿ ಶ್ರೀಮಂತರು ರಾಜಕಾರಣಿಗಳ ಮಕ್ಕಳೇ ಟಾರ್ಗೆಟ್ ಆಗುತ್ತಿದ್ದರು ಎನ್ನುವ ಸಂಗತಿ ತಿಳಿದು ಬಂದಿದೆ. 

ಪ್ರಭುಸ್ವಾಮಿ ನಟೇಕರ್

ಬೆಂಗಳೂರು : ಡ್ರಗ್ಸ್ ಮಾಫಿಯಾಕ್ಕೆ ಕ್ಲಬ್, ಪಬ್, ಪಂಚತಾರಾ ಹೋಟೆಲ್‌ಗಳೇ ಶ್ರೀರಕ್ಷೆ. ರಾಜಕಾರಣಿ, ಉದ್ಯಮಿ ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳು ಸೇರಿದಂತೆ ಶ್ರೀಮಂತರ ಮಕ್ಕಳೇ ಟಾರ್ಗೆಟ್. ಕಾನೂನಿನ ಕಬಂಧ ಬಾಹುಗಳಿಂದ ಸುರಕ್ಷಿತವಾಗಿ ಮಾದಕ ವಸ್ತುಗಳ ಮಾರಾಟಕ್ಕೆ ಡ್ರಗ್ಸ್ ಮಾಫಿಯಾ ಕಂಡುಕೊಂಡಿರುವ ಸುಲಭ ಮಾರ್ಗ ಇದು. 

ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಶ್ರೀಮಂತರೇ ಹೊರಹಾಕಿರುವ ಕಟು ಸತ್ಯ ಇದು. ಹಣದ ಲಾಲಸೆಗೆ ಮತ್ತು ಕಾನೂನಿನ  ರಕ್ಷಣೆಗಾಗಿ ಮಾದಕ ವಸ್ತುಗಳ ಜಾಲವು ಇಂತಹ ವರ್ಗದ ಮಕ್ಕಳನ್ನು ತನ್ನ ಬಲೆಗೆ ಬೀಳಿಸಿಕೊಂಡು ಸುಲಭವಾಗಿ ಯುವಜನಾಂಗವನ್ನು ಹಾಳು ಮಾಡುತ್ತಿದೆ. ಐಷಾರಾಮಿ ಜೀವನದ ಮೋಜಿನಲ್ಲಿರುವ ಶ್ರೀಮಂತ ವರ್ಗದ ಮಕ್ಕಳು ಕ್ಲಬ್‌ಗಳಿಗೆ ತೆರಳುವುದು ಸಾಮಾನ್ಯ. ತಡರಾತ್ರಿವರೆಗೆ ನಡೆಯುವ ಮಂದ ಬೆಳಕಿನ ಪಾರ್ಟಿಯಲ್ಲಿ ಮನಬಂದಂತೆ ಖರ್ಚು ಮಾಡುವುದೇ ಘನತೆ ಎಂದು ಪರಿಗಣಿಸಿರುವ ಜನಪ್ರತಿನಿಧಿ, ಉದ್ಯಮಿ, ಉನ್ನತ ಅಧಿಕಾರಿಗಳು, ಶ್ರೀಮಂತ ವರ್ಗದ ಮಕ್ಕಳು ಸುಲಭವಾಗಿ ಮಾದಕ ವಸ್ತುಗಳ ಸೆಳೆತಕ್ಕೊಳಗಾಗುತ್ತಿದ್ದಾರೆ. 

ಕ್ಲಬ್, ಪಬ್, ಪಂಚತಾರಾ ಹೋಟೆಲ್‌ಗಳಿಂದಲೇ ಮಾದಕ ವಸ್ತುಗಳ ಸೇವನೆಯು ಆರಂಭವಾಗುತ್ತದೆ. ಹಂತಹಂತವಾಗಿ ಪ್ರಾರಂಭವಾಗುವ ಮಾದಕ ವಸ್ತುಗಳ ಸೇವನೆಯು ಕೆಲವೇ ತಿಂಗಳಲ್ಲಿ ವ್ಯಸನವಾಗಿ ಪರಿವರ್ತನೆಯಾಗುತ್ತದೆ. ಆರಂಭದಲ್ಲಿ ಆಗಾಗ ಮಾದಕ ವಸ್ತು ಸೇವನೆ ಮಾಡಿದರೂ ಕ್ರಮೇಣ ಅದು ದೇಹಪೂರ್ತಿ ಆವರಿಸಿಕೊಂಡು ಸದಾ ದೇಹವು ಅಮಲು ಬಯಸುತ್ತದೆ. ಅದೇ ಮತ್ತಿನಲ್ಲಿ ತಡರಾತ್ರಿ ಯಲ್ಲಿ ಮನೆಗೆ ಹೋಗುವುದೇ ಒಂದು ರೀತಿಯ ಫ್ಯಾಷನ್ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಜನಪ್ರತಿನಿಧಿಯೊಬ್ಬರು. 

ಕ್ಲಬ್, ಪಬ್, ಪಂಚತಾರಾ ಹೋಟೆಲ್‌ಗಳ ಮೇಲೆ ಪೊಲೀಸರು ದಾಳಿ ನಡೆಸುವುದು ಕಡಿಮೆ.  ಹೀಗಾಗಿಯೇ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿರುವವರು ಇದೇ ಸ್ಥಳಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾದಕ ವಸ್ತುಗಳ ಮಾರಾಟಕ್ಕೆ ಅಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ. 

ಮೋಜು ಮಸ್ತಿನಲ್ಲಿರುವ ಯುವಜನಾಂಗಕ್ಕೆ ಸುಲಭಕ್ಕೆ ಸರಬರಾಜು ಮಾಡಬಹುದು. ಒಂದು ವೇಳೆ ಕಾನೂನಿಗೆ ಸಿಕ್ಕಿಬಿದ್ದರೂ ಜನಪ್ರತಿನಿಧಿಗಳ, ಅಧಿಕಾರಿಗಳು, ಶ್ರೀಮಂತರ ಮಕ್ಕಳಿಂದ ಶಿಫಾರಸು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಇದೇ ಕಾರಣಕ್ಕಾಗಿ ಶ್ರೀಮಂತ ವರ್ಗದ ಮಕ್ಕಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಮಾಫಿಯಾ ಕಾರ್ಯಾಚರಣೆ ಮಾಡುತ್ತದೆ. ಬೆಂಗಳೂರಿನಲ್ಲಿ ಕ್ಲಬ್, ಪಬ್, ಪಂಚತಾರಾ ಹೋಟೆಲ್‌ ಗಳಿಗೇನೂ ಕಡಿಮೆ ಇಲ್ಲ. ವಾರಾಂತ್ಯದಲ್ಲಿ ಇಲ್ಲಿ ಪಾರ್ಟಿಗಳು ನಡೆಯುತ್ತವೆ. 

ಆ ಸಮಯದಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ಮತ್ತು ಅಧಿಕವಾಗಿ ನಡೆಯುತ್ತದೆ. ಮೈಸೂರು, ಬೆಳಗಾವಿ, ಹುಬ್ಬಳ್ಳಿ - ಧಾರವಾಡದಂತಹ ನಗರಗಳೂ ಇದಕ್ಕೆ ಹೊರತಾಗಿಲ್ಲ. ಅಲ್ಲಿಯೂ ಇತ್ತೀಚೆಗೆ ಡ್ರಗ್ಸ್ ಮಾಫಿಯಾ ವ್ಯಾಪಿಸಿದ್ದು, ಯುವಜನಾಂಗ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.  

loader