ಬಿಟ್‌ಕಾಯಿನ್‌ನಂತಹ ಡಿಜಿಟಲ್ ಕರೆನ್ಸಿ ಬಗ್ಗೆ ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕುಗಳು ಆತಂಕ ವ್ಯಕ್ತಪಡಿಸುತ್ತಿರುವಾಗಲೇ, ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರಿನಲ್ಲಿ ನವಜೋಡಿಯೊಂದು ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆ ಸ್ವೀಕರಿಸುವ ಮೂಲಕ ಸುದ್ದಿ ಮಾಡಿದೆ.
ಬೆಂಗಳೂರು (ಡಿ.25): ಬಿಟ್ಕಾಯಿನ್ನಂತಹ ಡಿಜಿಟಲ್ ಕರೆನ್ಸಿ ಬಗ್ಗೆ ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕುಗಳು ಆತಂಕ ವ್ಯಕ್ತಪಡಿಸುತ್ತಿರುವಾಗಲೇ, ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರಿನಲ್ಲಿ ನವಜೋಡಿಯೊಂದು ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆ ಸ್ವೀಕರಿಸುವ ಮೂಲಕ ಸುದ್ದಿ ಮಾಡಿದೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿಗಳಾಗಿರುವ ಪ್ರಶಾಂತ್ ಹಾಗೂ ನೀತಿ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 200 ಅತಿಥಿಗಳ ಪೈಕಿ ಶೇ.95ರಷ್ಟು ಮಂದಿ ಬಿಟ್ಕಾಯಿನ್ ಮೂಲಕವೇ ‘ಮುಯ್ಯಿ’ ಹಾಕಿದ್ದಾರೆ. ಉಳಿದ ಶೇ.5ರಷ್ಟು ಅಂದರೆ ೧೦ ಮಂದಿ ಮಾತ್ರವೇ ಸಾಂಪ್ರದಾಯಿಕ ರೀತಿ ಯಲ್ಲಿ ಉಡುಗೊರೆ ಕೊಟ್ಟಿದ್ದಾರೆ. ತನ್ಮೂಲಕ ಬಿಟ್ ಕಾಯಿನ್ ಗಿಫ್ಟ್ ಪಡೆದು ಮದುವೆ ಮಾಡಿಕೊಂಡ ದೇಶದ ಮೊದಲ ಜೋಡಿ ಇದಾಗಿದೆ. ನೀತಿ ಹಾಗೂ ಪ್ರಶಾಂತ್ ಅವರು
ಈಗಾಗಲೇ ಬಿಟ್ಕಾಯಿನ್ನಲ್ಲಿ ಹಣ ಹೂಡಿದ್ದಾರೆ. ತಮ್ಮ ವಿವಾಹ ಸಮಾರಂಭಕ್ಕೆ ಬರುವವರಿಗೆ ಈ ಕರೆನ್ಸಿಯ ಪರಿಚಯ ಮಾಡಿಸಿ, ಅದನ್ನೂ ಒಂದು ಉಡುಗೊರೆ ಆಯ್ಕೆಯಾಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದಾರೆ. ‘ಮದುವೆಯಲ್ಲಿ ಭಾಗವಹಿಸುತ್ತಿದ್ದ ಬಹುತೇಕ ಸ್ನೇಹಿತರು ತಂತ್ರಜ್ಞಾನ ವಲಯ, ಸ್ಟಾರ್ಟಪ್, ಹೂಡಿಕೆದಾರರಾಗಿದ್ದರು.
ಹೀಗಾಗಿ ಬಿಟ್ಕಾಯಿನ್ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆವು. ಇದಕ್ಕಾಗಿ ಝೆಬ್ಪೇ ಎಂಬ ಡಿಜಿಟಲ್ ಕರೆನ್ಸಿ ವಿನಿಮಯ ವೇದಿಕೆ ಜತೆ ಪಾಲುದಾರಿಕೆ ಮಾಡಿಕೊಂಡೆವು’ ಎಂದು ಪ್ರಶಾಂತ್ ತಿಳಿಸಿದ್ದಾರೆ. ಮದುವೆಗೆ ಮಾಡಿಸಲಾಗಿದ್ದ ಆಹ್ವಾನ ಪತ್ರಿಕೆಯೂ ವಿಭಿನ್ನವಾಗಿತ್ತು. ಅದರಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿತ್ತು. ಡಿಜಿಟಲ್ ಕರೆನ್ಸಿ ಬಗ್ಗೆ ಗೊತ್ತಿಲ್ಲದವರಿಗೆ ಅದನ್ನು ಖರೀದಿಸುವುದು ಹೇಗೆಂಬುದರ ವಿವರ ನೀಡಲಾಗಿತ್ತು. ಇದಲ್ಲದೆ ವಿವಾಹದಲ್ಲಿ ಅತಿಥಿಗಳಿಗೆಂದು ಇರಿಸಲಾಗಿದ್ದ ಪ್ರತಿ ಯೊಂದು ಪಾನೀಯಕ್ಕೂ ಜಗತ್ತಿನ ವಿವಿಧ ಡಿಜಿಟಲ್ ಕರೆನ್ಸಿಗಳ ಹೆಸರು ಇಡಲಾಗಿತ್ತು.
