ದಂಪತಿ ಪ್ರಾಣಕ್ಕೆ ಸಂಚಕಾರ ತಂತು ಬಾತ್‌ರೂಮ್ ಶೃಂಗಾರ
‘ಶಿವಗಂಗಾ’ ಅಪಾರ್ಟ್ ಮೆಂಟ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದ ದಂಪತಿ
ಸಂಬಂಧಿಕರ ಮನೆಗೆ ಮಕ್ಕಳನ್ನು ಬಿಟ್ಟು ಹಿಂತಿರುಗಿದ್ದ ಮಹೇಶ್
ಸಂಬಂಧಿಕರು ಕರೆ ಮಾಡಿದರೂ ಸ್ವೀಕರಿಸದ ದಂಪತಿ
ಹುಡುಕಾಡಿದಾಗ ಬಾತ್ ರೂಮ್‌ನಲ್ಲಿ ದಂಪತಿ ಪತ್ತೆ
ಬೆಂಗಳೂರು[ಜು.11] ತಮ್ಮ ಫ್ಲ್ಯಾಟ್‌ನ ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ರಾಜರಾಜೇಶ್ವರಿ ನಗರದ ಸಮೀಪ ಪಟ್ಟಣಗೆರೆಯಲ್ಲಿ ಮಂಗಳವಾರ ನಡೆದಿದೆ.
ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್‌ಮೆಂಟ್ ನಿವಾಸಿ ಮಹೇಶ್ (35) ಹಾಗೂ ಅವರ ಪತ್ನಿ ಶೀಲಾ (30) ಮೃತ ದುರ್ದೈವಿ. ತಮ್ಮ ಫ್ಲ್ಯಾಟ್‌ನ ಸ್ನಾನದ ಕೋಣೆಯಲ್ಲಿ ಬೆಳಗ್ಗೆ 11ರ ಸುಮಾರಿಗೆ ದಂಪತಿ ಸ್ನಾನಕ್ಕೆ ತೆರಳಿದ್ದಾಗ ಈ ದುರಂತ ನಡೆದಿದೆ. ಮಧ್ಯಾಹ್ನ ಶಾಲೆ ಮುಗಿಸಿ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹೇಶ್ ಮೂಲತಃ ಅಥಣಿ ತಾಲೂಕಿನವರಾಗಿದ್ದು, ಏಳು ವರ್ಷಗಳ ಹಿಂದೆ ಶೀಲಾ ಜತೆ ಜತೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವೈಟ್‌ಫೀಲ್ಡ್ ಹತ್ತಿರ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಮಹೇಶ್, ತಮ್ಮ ಪತ್ನಿ ಮತ್ತು ಮಕ್ಕಳ ಜತೆ ‘ಶಿವಗಂಗಾ’ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿ ದ್ದರು. ಬೆಳಗ್ಗೆ ಮನೆ ಹತ್ತಿರದ ಖಾಸಗಿ ಶಾಲೆಗೆ ಮಕ್ಕಳು ತೆರಳಿದ ನಂತರ ದಂಪತಿ, ಒಟ್ಟಿಗೆ ಸ್ನಾನ ಮಾಡಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 12ಕ್ಕೆ ಮಹೇಶ್ ಮಕ್ಕಳನ್ನು ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಅವರ ಸಂಬಂಧಿ ಮನೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಮಹೇಶ್ ಅವರಿಗೆ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೊಬೈಲ್ ಕರೆ ಸ್ವೀಕರಿಸದ ಕಾರಣ ಮಕ್ಕಳನ್ನು ಕರೆದುಕೊಂಡು ಅವರ ಬಂಧುಗಳು, ಕೆಲ ಹೊತ್ತಿನ ಬಳಿಕ ಮಹೇಶ್ ಅವರ ಫ್ಲ್ಯಾಟ್‌ಗೆ ಬಂದಿದ್ದಾರೆ. ಆಗ ಅರ್ಧ ಮುಚ್ಚಿದ್ದ ಮುಂಬಾಗಿಲನ್ನು ತೆಗೆದುಕೊಂಡು ಒಳ ಪ್ರವೇಶಿಸಿ ಅವರು, ಶೀಲಾ, ಮಹೇಶ್ ಅವರನ್ನು ಕೂಗಿದ್ದಾರೆ.ಆಗಲೂ ದಂಪತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಭಯಗೊಂಡ ಮೃತರ ಸಂಬಂಧಿಕರು, ಫ್ಲ್ಯಾಟ್‌ನಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಕೊನೆಗೆ ಸ್ನಾನ ಮನೆ ಬಾಗಿಲು ತೆಗೆದಾಗ ಬೆತ್ತಲೆಯಾಗಿ ಮಹೇಶ್ ದಂಪತಿ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡು ಸಂಬಂಧಿಕರು ಕಿರುಚಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.