ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಕನ್ನಡದ ಹುಡುಗನ ಸಾಕ್ಷ್ಯಚಿತ್ರ!
- ವಿದೇಶದಲ್ಲಿ ಕನ್ನಡದ ಹುಡುಗರು ಬೆಳೆಯುತ್ತಿರುವ ಪರಿ ಇದು!
- ಪತ್ರಕರ್ತನಾಗಿ ಕ್ಯಾರಿಯರ್ ಆರಂಭಿಸಿದ ಬೆಂಗಳೂರು ಹುಡುಗ ಈಗ ಸಾಕ್ಷ್ಯಚಿತ್ರ ನಿರ್ಮಾಪಕ
- ಶ್ರವಣ್ ರಿಗ್ರೆಟ್ ಅಯ್ಯರ್ ರಚಿಸಿರುವ ‘ಲೈಫ್ ಇನ್ ದಿ ಜಂಗಲ್ಸ್ ಆಫ್ ಮಡಗಾಸ್ಕರ್’ಗೆ ಪ್ರಶಸ್ತಿಗಳ ಪರ್ವ
ನೂರ ಮೂವತ್ತು ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಓರ್ವ ಏನಾದರೂ ಸಾಧಿಸುವುದೇ ಒಂದು ಮಹತ್ತರ ಕೆಲಸ. ಅಂತಹುದರಲ್ಲಿ ವಿದೇಶಕ್ಕೆ ಹೋಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ 28 ವರ್ಷದ ಯುವಕ ಏನನ್ನಾದರೂ ಸಾಧಿಸುತ್ತಾನೆ ಎಂದಾದರೆ ಅದು ಒಂದು ಮಹಾತ್ಸಾದನೆಯೇ ಸರಿ!.
ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು ಬಹಳಷ್ಟು ಮಂದಿ ಇದ್ದಾರೆ. ಇದೀಗ ಆ ಸಾಲಿಗೆ ಸೇರಿದ್ದಾರೆ 28 ವರ್ಷದ ಯುವ-ಪತ್ರಕರ್ತ-ಚಿತ್ರನಿರ್ಮಾಪಕ!
ಈ ಯುವ ಚಿತ್ರನಿರ್ಮಾಪಕನ ಹೆಸರು ಶ್ರವಣ್ ರಿಗ್ರೆಟ್ ಅಯ್ಯರ್. ಮೂಲತ: ಬೆಂಗಳೂರಿನವರಾದ ಶ್ರವಣ್, ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದವರು. ಬಳಿಕ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಕೈಹಾಕಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಶ್ರವಣ್ ನಿರ್ಮಿಸಿರುವ 14 ನಿಮಿಷದ ‘ಲೈಫ್ ಇನ್ ದಿ ಜಂಗಲ್ಸ್ ಆಫ್ ಮಡಗಾಸ್ಕರ್’ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಸದ್ದು ಮಾಡಿದೆ.
[ಎಲಿಫ್ಯಾಂಟ್ ಬರ್ಡ್‌ನ ಮೊಟ್ಟೆಕವಚದ ಪಳಿಯುಳಿಕೆಯೊಂದಿಗೆ ಶ್ರವಣ್]
[ಅಪರೂಪದ ರಿಂಗ್ ಟೇಲ್ಡ್ ಲೀಮರ್ ಪ್ರಾಣಿ]
ಆಫ್ರಿಕಾದ ಅರಣ್ಯಗಳು ಭೂಲೋಕದ ಮೇಲಿರುವ ಒಂದು ವಿಸ್ಮಯ . ಆಫ್ರಿಕಾ ಖಂಡದ ಪೂರ್ವ ಕರಾವಳಿಯಲ್ಲಿರುವ ಮಡಗಾಸ್ಕರ್ ದ್ವೀಪದ ಅರಣ್ಯಗಳು ಅಂತಹ ಪ್ರಾಕೃತಿಕ ಸೋಜಿಗಗಳನ್ನೊಳಗೊಂಡ ಜಾಗ. ಅಲ್ಲಿನ ಸಸ್ಯ ಸಂಕುಲ, ಜೀವವೈವಿಧ್ಯ ಹಾಗೂ ಜನ ಜೀವನವನ್ನು ಹತ್ತಿರದಿಂದ ನೋಡುವುದು ಅನ್ವೇಷಕರು, ವಿಜ್ಞಾನಿಗಳು, ಪ್ರಕೃತಿಪ್ರಿಯರ ಕನಸು! ಅಂತಹುದರಲ್ಲಿ ಮಡಗಾಸ್ಕರ್ಗೆ ಭೇಟಿ ನೀಡಿ, ಅಲ್ಲಿದ್ದು, ಅಲ್ಲಿನ ಕೌತುಕತೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಜಗತ್ತಿನ ಮುಂದೆ ಇಡುವ ಕೆಲಸ ಮಾಡಿದ್ದಾರೆ ಶ್ರವಣ್. ಮಡಗಾಸ್ಕರ್ನ ಶೇ.90 ಜೀವಪ್ರಭೇದಗಳು ಅಪರೂಪದ್ದು, ಅವು ಜಗತ್ತಿನ ಬೇರೆಲ್ಲೂ ಕಾಣಸಿಗದ್ದು! ಆದರೆ ಅಲ್ಲಿನ ಜನರ ಕೆಲವು ಕೃಷಿ ಅಭ್ಯಾಸಗಳು ಈ ಅಪರೂಪದ ಜೀವಸಂಕುಲಕ್ಕೆ ಗಂಡಾಂತರವನ್ನು ತಂಡೊಡ್ಡಿವೆ.
[ಅಪರೂಪದ ಜಿರಾಫೆ ಕತ್ತಿನ ಇರುವೆಯ ಫೋಟೋ ತೆಗೆಯುತ್ತಿರುವ ಶ್ರವಣ್]
[ಮಡಗಾಸ್ಕರ್‌ನಲ್ಲಿ ಜೀವಪ್ರಭೇದಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಮುದಾಯ ಸದಸ್ಯರೊಂದಿಗೆ]
ಭಾರೀ ಮಳೆಯನ್ನು ಕಾಣುವ ಮಳೆಕಾಡು ಪ್ರದೇಶವಾಗಿರುವ ಮಡಗಾಸ್ಕರ್‌ನಂತಹ ದಟ್ಟ ಅರಣ್ಯ ಪ್ರದೇಶಕ್ಕೆ ಒಬ್ಬನೇ ಹೋಗಿ ಸಾಕ್ಷ್ಯಚಿತ್ರ ನಿರ್ಮಿಸುವುದು ಸಾಹಸದ ಕೆಲಸವೇ ಸರಿ. ಅಂತಹುದರಲ್ಲಿ ಈ 28 ವರ್ಷದ ಬೆಂಗಳೂರು ಹುಡುಗ ಶ್ರವಣ್, ಅಲ್ಲಿನ ಅಪರೂಪದ ಸಸ್ಯ-ಪ್ರಾಣಿ ಸಂಕುಲ, ಅವನತಿಯಂಚಿನಲ್ಲಿರುವ ಪ್ರಭೇದಗಳನ್ನು, ಅವುಗಳ ಮುಂದಿರುವ ಸಂಕೀರ್ಣ ಸವಾಲುಗಳನ್ನು ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ. ಸಹಜವಾಗಿ ಶ್ರವಣ್ ಪರಿಶ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.
ಖ್ಯಾತ ಹಿರಿಯ ಪತ್ರಕರ್ತ ರಿಗ್ರೆಟ್ ಅಯ್ಯರ್ ಅವರ ನಿರ್ಮಾಣ ಸಂಸ್ಥೆ ‘ರಿಗ್ರೆಟ್ ಅಯ್ಯರ್ ಪ್ರೊಡಕ್ಷನ್’ ಅಡಿಯಲ್ಲಿ ಈ ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿವೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋದಲ್ಲಿ ನಡೆದ ಅ್ಯಕೊಲೇಡ್ ಗ್ಲೋಬಲ್ ಫಿಲ್ಮ್ ಸ್ಪರ್ಧೆಯಲ್ಲಿ ಮೆರಿಟ್ ಪ್ರಶಸ್ತಿ, ನವದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ತ್ಯುತ್ತಮ ಸಾಕ್ಷ್ಯಚಿತ್ರ ಜ್ಯೂರಿ ಪ್ರಶಸ್ತಿ, ಕೋಲ್ಕತ್ತಾದ ಅಂತರಾಷ್ಟ್ರೀಯ ಕಲ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ತ್ಯುತ್ತಮ ಪೃಕೃತಿ ಮತ್ತು ಪರಿಸರ ಸಾಕ್ಷ್ಯಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಲ್ಲೂ ಈ ಚಿತ್ರ ಆಯ್ಕೆಯಾಗಿದೆ.
ಗ್ರೀನ್ ಆಸ್ಕರ್ ಎಂದೇ ಖ್ಯಾತವಾಗಿರುವ ವೈಲ್ಡ್ ಸ್ಕ್ರೀನ್ ಪಾಂಡ ಪ್ರಶಸ್ತಿ ಸೇರಿದಂತೆ, ರೋಮ್, ಕೆನಾಡ, ಸ್ಪೇನ್, ಜಪಾನ್ ಮತ್ತು ಇಂಗ್ಲಂಡ್‌ನಲ್ಲೂ ಹಲವಾರು ಪ್ರಶಸ್ತಿಗಳಿಗೂ ಈ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ.
ಲೈಫ್ ಇನ್ ದಿ ಜಂಗಲ್ಸ್ ಆಫ್ ಮಡಗಾಸ್ಕರ್ ನ ಒಂದು ಝಲಕ್ ಇಲ್ಲಿದೆ:
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ [IISc] ಪರಿಸರ ವಿಜ್ಞಾನ ಕೇಂದ್ರದಲ್ಲಿ ಪರಿಸರ ನಿರ್ವಹಣೆ ಕೋರ್ಸ್ ಮಾಡಿರುವ ಶ್ರವಣ್ ನ್ಯೂಜೆರ್ಸಿ ವಿವಿಯಲ್ಲೂ ಉನ್ನತ ಶಿಕ್ಷಣ ಪಡೆದಿದ್ದಾರೆ. ಈಗಾಗಲೇ 3 ಖಂಡಗಳ 10 ದೇಶಗಳನ್ನು ಸುತ್ತಾಡಿರುವ ಶ್ರವಣ್, ಹೊಸ ‘ಜಗತ್ತು’ಗಳ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
[ಅಪರೂಪದ ಸಸ್ಯಪ್ರಭೇದ ಬಾಒಬಾಸ್ ಮರ]
ತಮ್ಮ ಅನುಭವಗಳನ್ನು ಆಗ್ಮೆಂಟೆಡ್ ರಿಯಾಲಿಟಿ [AR],ವರ್ಚುವಲ್ ರಿಯಾಲಿಟಿ, 360 ಡಿಗ್ರಿ ವಿಡಿಯೋ ಹಾಗೂ ಡ್ರೋನ್ ಬಳಸಿ ಕಥೆಹೇಳುವ ಪ್ರಾಜೆಕ್ಟ್ಗಳಲ್ಲಿ ಶ್ರವಣ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕನ್ನಡದ ಹುಡುಗನ ಸಾಹಸಗಳು ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ...